ಬಿಜೆಪಿಯಲ್ಲಿನ ಆಂತರಿಕ ಪ್ರಜಾತಂತ್ರಕ್ಕೆ ಅಡ್ವಾಣಿ ಬಲಿ !

ಕಾಂಗ್ರೆಸ್ ನಾಯಕ ಸುರ್ಜೇವಾಲ ಲೇವಡಿ

ಹೊಸದಿಲ್ಲಿ : ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಯನ್ನು ಟೀಕಿಸಿ ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಪ್ರಶ್ನಿಸಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಪ್ರಧಾನಿ ತಮ್ಮದೇ ಪಕ್ಷದ ನಾಯಕರುಗಳು ಎತ್ತಿದ ಪ್ರಶ್ನೆಗಳಿಗೆ ಯಾವಾಗ ಉತ್ತರಿಸುತ್ತಾರೆಂದು ಕೇಳಿದೆ.

ಹಿರಿಯ ಬಿಜೆಪಿಗರಾದ ಎಲ್ ಕೆ ಅಡ್ವಾಣಿ, ಮುರಳೀ ಮನೋಹರ್ ಜೋಷಿ, ಸಂಜಯ್ ಜೋಷಿ, ಕೇಶುಭಾಯ್ ಪಟೇಲ್ ಮತ್ತು ಆನಂದಿಬೆನ್ ಪಟೇಲ್ ಅವರನ್ನು ಉಲ್ಲೇಖಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ, ಈ ನಾಯಕರೆಲ್ಲರೂ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಡುವಿನ ಆಂತರಿಕ ಪ್ರಜಾಪ್ರಭುತ್ವದ ಸಂತ್ರಸ್ತರು ಎಂದು ಬಣ್ಣಿಸಿದ್ದಾರೆ. “ಪ್ರೀತಿಯ ಪ್ರಧಾನಿಯವರೇ, ಶಹಝಾದ್, ಶಾ-ಝಾದಾ ಹಾಗೂ ಶೌರ್ಯ ಮೇಲೆ ನಿಮಗಿರುವ ಪ್ರೀತಿ ಎಲ್ಲರಿಗೂ ತಿಳಿದಿದ್ದೇ ಆಗಿದೆ. ಹಿರಿಯ ಬಿಜೆಪಿ ನಾಯಕರುಗಳಾದ ಅರುಣ್ ಶೌರಿ, ಯಶವಂತ್ ಸಿನ್ಹಾ ಹಾಗೂ ಶತ್ರುಘ್ನ ಸಿನ್ಹಾ ಅವರು ಕೇಳಿದ ಪ್ರಶ್ನೆಗಳಿಗೆ ನೀವು ಯಾವಾಗ ಉತ್ತರಿಸುತ್ತೀರೆಂಬುದನನ್ನು ದೇಶ ತಿಳಿಯ ಬಯಸುತ್ತದೆ” ಎಂದು ಟ್ವೀಟ್ ಮಾಡಿದ ಸುರ್ಜೇವಾಲ, “ನಿಮ್ಮ ಆಂತರಿಕ ಪ್ರಜಾಪ್ರಭುತ್ವದಿಂದ ಅಡ್ವಾಣಿ, ಜೋಷಿ, ಆನಂದಿ ಬೆನ್, ಹಿರೇನ್ ಪಾಂಡ್ಯರಂತಹ ನಾಯಕರು ಇತಿಹಾಸದ ಪುಟಗಳಲ್ಲಿ ಕಳೆದುಹೋಗಿದ್ದಾರೆ” ಎಂದಿದ್ದಾರೆ.

ಇದಕ್ಕೂ ಮುನ್ನ ಗುಜರಾತದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬಹಳ ಹಿಂದೆಯೇ ನಿರ್ಧಾರವಾಗಿದೆ ಎಂದಿದ್ದರಲ್ಲದೆ “ನಿಮ್ಮ ಮನೆಯಲ್ಲಿಯೇ (ಪಕ್ಷದಲ್ಲಿ) ಪ್ರಜಾಪ್ರಭುತ್ವವಿಲ್ಲವೆಂದಾದಲ್ಲಿ ದೇಶದಲ್ಲಿ ಹೇಗೆ ಪ್ರಜಾಪ್ರಭುತ್ವ ಪದ್ಧತಿಯನ್ನು ಪಾಲಿಸುತ್ತೀರಿ” ಎಂದು ಪ್ರಶ್ನಿಸಿದ್ದರು.