ವಿಟ್ಲ ಆಸ್ಪತ್ರೆಯಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಆಗ್ರಹ

ಸುದ್ದಿಗಾರರಲ್ಲಿ ಮಾತಾಡಿದ ಮುಖಂಡರು

ಫೆಬ್ರವರಿ 5ರೊಳಗೆ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಅವ್ಯವಸ್ಥೆಯ ಆಗರವಾಗಿರುವ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಸಮರ್ಪಕ ಸೇವೆ ನೀಡುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ತಕ್ಷಣವೇ ವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ ನಡೆಸುತ್ತೇವೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಹಮ್ಮದ್ ಕುಂಞ ಎಚ್ಚರಿಸಿದರು.

ವಿಟ್ಲದ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕುಂಞ, “ಕಳೆದ 20 ವರ್ಷಗಳಿಂದ ವಿಟ್ಲದ ಸಮುದಾಯ ಆಸ್ಪತ್ರೆ ಸ್ಥಿತಿ ಸುಧಾರಿಸಿಲ್ಲ. ಕೋಟಿಗಟ್ಟಲೆ ರೂ ಅನುದಾನ ಖರ್ಚಾಗಿದ್ದರೂ ಕೇವಲ ಕಟ್ಟಡ ಮತ್ತು ಆವರಣ ಗೋಡೆ ಮಾತ್ರ ಅಭಿವೃದ್ಧಿಯಾಗಿದ್ದು ರೋಗಿಗಳಿಗೆ ಯಾವುದೇ ಅನುಕೂಲವಾಗಿಲ್ಲ. ವೈದ್ಯರ ಕೊರತೆ, ದಾದಿಯರ ಕೊರತೆಗಳಲ್ಲದೇ ಮರಣೋತ್ತರ ಪರೀಕ್ಷೆ ನಡೆಸಲು ಡಿ ಗ್ರೂಪ್ ಸಿಬ್ಬಂದಿಯೇ ಇಲ್ಲವಾಗಿದೆ. ವಿದ್ಯುತ್ ಕೈಕೊಟ್ಟಾಗ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಕೇವಲ ದಾಖಲೆಗಳಲ್ಲಿ ಮಾತ್ರವೇ ವಿಟ್ಲ ಸಮುದಾಯ ಆಸ್ಪತ್ರೆ ಮೇಲ್ದರ್ಜೆಯ ಸ್ಥಾನ ಗಿಟ್ಟಿಸಿಕೊಂಡಿದೆ” ಎಂದು ಹೇಳಿದರು.

ಅವ್ಯವಸ್ಥೆಯ ಆಗರವಾಗಿರುವ ವಿಟ್ಲದ ಸಮುದಾಯ ಆಸ್ಪತ್ರೆ
ಅವ್ಯವಸ್ಥೆಯ ಆಗರವಾಗಿರುವ ವಿಟ್ಲದ ಸಮುದಾಯ
ಆಸ್ಪತ್ರೆ

“ವಾರದ ಹಿಂದಷ್ಟೆ ಉಕ್ಕುಡದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಇಬ್ಬರ ಶವಪರೀಕ್ಷೆ ನಡೆಸಲು ಡಿ ಗ್ರೂಪ್ ಸಿಬ್ಬಂದಿಯಿಲ್ಲದೇ ಮೃತರ ಕುಟುಂಬಸ್ಥರು ಪರದಾಡಿದ್ದಾರೆ. ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಕೇವಲ ಭಾಷಣದಲ್ಲಿ ಮಾತ್ರವೇ ವಿಟ್ಲವನ್ನು ಅಭಿವೃದ್ಧಿ ಮಾಡುತ್ತಾರೆಯೇ ವಿನಹ ಕಾರ್ಯದಲ್ಲಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ವಿಟ್ಲ ಸುತ್ತಮುತ್ತ ಆಕಸ್ಮಿಕ ಸಾವು ಸಂಭವಿಸಿದರೆ ಶವಪರೀಕ್ಷೆ ನಡೆಸಲು ಮೃತರ ಕುಟುಂಬಸ್ಥರು ದಿನಗಟ್ಟಲೇ ಕಾಯುವ ದುಃಸ್ಥಿತಿ ಬಂದೊದಗಿದೆ. ಶವಪರೀಕ್ಷೆ ನಡೆಸಬೇಕಾಗಿದ್ದ ಡಿ ಗ್ರೂಪ್ ಸಿಬ್ಬಂದಿಯನ್ನು ಮೃತರ ಕಡೆಯವರೇ ಕರೆದೊಯ್ಯಬೇಕಾದ ಪರಿಸ್ಥಿತಿ ಬಂದಿರುವುದು ಸರಕಾರದ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಜಿಲ್ಲೆಯ ಯು ಟಿ ಖಾದರ್ ಈ ಹಿಂದೆ ಆರೋಗ್ಯ ಸಚಿವರಾಗಿದ್ದರೂ ವಿಟ್ಲದತ್ತ ಗಮನ ಹರಿಸದಿರುವುದು ದುರಂತವಾಗಿದೆ” ಎಂದು ಕುಂಞ ಹೇಳಿದರು.

“ಜವಾಬ್ದಾರಿಯುತ ಜಿ ಪಂ ಸದಸ್ಯರು, ತಾ ಪಂ ಸದಸ್ಯರು ಭಾಷಣ ಬಿಗಿಯುವುದನ್ನು ಬಿಟ್ಟು ಇನ್ನಾದರೂ ಬಡ ಜನರ ಕಣ್ಣೀರಿಗೆ ಸ್ಪಂದಿಸಬೇಕಾಗಿದೆ. ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಶಾಸಕಿ ಶಕುಂತಳಾ ಶೆಟ್ಟಿಯವರು ಆರೋಗ್ಯ ಸಚಿವರೊಂದಿಗೆ ವಿಟ್ಲ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಚರ್ಚಿಸಿ ಸೂಕ್ರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಫೆಬ್ರವರಿ 5ರೊಳಗೆ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.