ಟ್ರಾಫಿಕ್ ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿ ನೇಮಕ : ಸುರೇಶ್

ಮಂಗಳೂರು : ನಗರದ ಟ್ರಾಫಿಕ್ ಸಮಸ್ಯೆ ಬಗ್ಗೆ ದಿನನಿತ್ಯ ದೂರುಗಳು ಬರುತ್ತಿರುವ ಮತ್ತು ಪೊಲೀಸರು ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮದಲ್ಲೂ ವ್ಯಾಪಕ ದೂರುಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಟ್ರಾಫಿಕ್ಕಿಗೆ ಹೆಚ್ಚಿನ ಸಿಬ್ಬಂದಿನೇಮಕ ಮಾಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಹೇಳಿದ್ದಾರೆ.

ಶುಕ್ರವಾರ ಜರುಗಿದ ಫೋನ್ ಇನ್ ಕಾರ್ಯಕ್ರಮದ ಬಳಿಕ ಸಾರ್ವಜನಿಕರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಹಂಪನಕಟ್ಟೆ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಕಾಡುತ್ತಿರುವ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತವೂ ಬಹಳಷ್ಟು ಯತ್ನ ನಡೆಸಿದೆ. ಸ್ಟೇಟ್ ಬ್ಯಾಂಕ್ ಬಳಿ ಇರುವ ಬಸ್ ನಿಲ್ದಾಣವನ್ನು ಪಂಪ್ವೆಲ್ಲಿಗೆ ಸ್ಥಳಾಂತರ ಮಾಡುವ ಬಗ್ಗೆ ಯತ್ನ ಸಾಗಿದೆ ಎಂದರು.

ಪಡೀಲ್-ಮರೋಳಿ ಸೇರಿದಂತೆ ಕೆಲವು ರೂಟುಗಳಲ್ಲಿ ಸಾಗುವ ಬಸ್ ಚಾಲಕರು ಬೆಳಿಗ್ಗೆ ಮತ್ತು ಸಂಜೆ ಮಾತ್ರ ಸಂಚಾರ ನಡೆಸಿ ಬಳಿಕ ಟ್ರಿಪ್ ಸ್ಥಗಿತಗೊಳಿಸುತ್ತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂಬ ಪ್ರಶ್ನೆ ಬಂದಾಗ ಉತ್ತರಿಸಿದ ಕಮಿಷನರ್ “ಅಂತಹ ಬಸ್ಸುಗಳ ವಿರುದ್ಧ ದೂರು ನೀಡಿದಲ್ಲಿ ಕಾರ್ಯಾಚರಣೆ ಮಾಡಲಾಗುವುದು” ಎಂದರು. ಬಸ್ ಮಾಲಕರು ಟಿಕೆಟ್ ನೀಡದಿರುವ ಬಗ್ಗೆ ದಿನನಿತ್ಯ ದೂರುಗಳು ಬರುತ್ತಿವೆ. ಆರ್ಟಿಒ ಮತ್ತು ಪೊಲೀಸರು ಈಗಾಗಲೇ ಜಂಟಿ ಕಾರ್ಯಾಚರಣೆ ನಡೆಸಿ ಟಿಕೆಟ್ ನೀಡದ ಬಸ್ ಚಾಲಕರ, ನಿರ್ವಾಹಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇನ್ಮೇಲೆ ಟ್ರಾಫಿಕ್ ಪೊಲೀಸರೊಂದಿಗೆ ಸಿವಿಲ್ ಪೊಲೀಸರೂ ಕಾರ್ಯಾಚರಣೆ ಮಾಡುತ್ತಾರೆ ಎಂದರು. ಪ್ರಾರ್ಥನಾ ಮಂದಿರಗಳಲ್ಲಿ ಮುಂಜಾನೆ ಮತ್ತು ಸಂಜೆ ವೇಳೆಗಳಲ್ಲಿ ಧ್ವನಿವರ್ಧಕಗಳನ್ನು ಕರ್ಕಶವಾಗಿ ಹಾಕುತ್ತಿರುವುದರಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಪಾಠಪ್ರವಚನಗಳಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ಸೂಚನೆ ನೀಡಿ ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು.

ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲೂ ಧ್ವನಿವರ್ಧಕಗಳನ್ನು ಕೇವಲ ಮಂದಿರದ ಒಳಗಡೆಯಷ್ಟೇ ಕೇಳುವ ಧ್ವನಿಯಲ್ಲಿ ಇರಿಸಲು ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಕಮಿಷನರ್ ಮನವಿ ಮಾಡಿದರು. ಉಳಿದಂತೆ ಮತ್ತೆ ಟ್ರಾಫಿಕ್ ಸಮಸ್ಯೆಗಳು, ಫುಟ್ಪಾತಿನಲ್ಲಿ ಸಂಜೆ ತಿಂಡಿ ಮಾರಾಟ, ಮಾರುಕಟ್ಟೆ ಜಾಗದಲ್ಲಿ ಪಾರ್ಕಿಂಗ್ ಸಮಸ್ಯೆಗಳ ದೂರು ಹರಿದುಬಂತು.