`ಅಡ್ಡಹೊಳೆ-ಬಿ ಸಿ ರೋಡು ಚತುಷ್ಪಥ ಕಾಮಗಾರಿ ಸೆಪ್ಟೆಂಬರಿನಲ್ಲಿ ಆರಂಭ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಗುಂಡ್ಯ ಸಮೀಪದ ಅಡ್ಡಹೊಳೆಯಿಂದ ಬಿ ಸಿ ರೋಡುವರೆಗಿನ 65 ಕಿ ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು, ಭೂಸ್ವಾಧೀನ ಪ್ರಕ್ರಿಯೆ 92.93ರಷ್ಟು ಪೂರ್ಣಗೊಂಡಿದೆ ಎಂದು ಸಂಸದ ನಳಿನಕುಮಾರ್ ಕಟೀಲು ಹೇಳಿದರು.

ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ನರೇಗಾ ಹಾಗೂ ವಿವಿಧ ಕೇಂದ್ರ ಅನುದಾನಿತ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಭೂಸ್ವಾಧೀನ ಮತ್ತು ಸಕ್ಷಮ ಪ್ರಾಧಿಕಾರದ ಅಧಿಕಾರಿ ಮಂಜುನಾಥ್ ಯೋಜನೆಯ ಮಾಹಿತಿ ನೀಡಿದರು.

ಈ ಕಾಮಗಾರಿಗಾಗಿ ಒಟ್ಟು 270.65 ಹೆಕ್ಟೇರ್ ಭೂಸ್ವಾಧೀನ ಪಡಿಸಿಕೊಳ್ಳಬೇಕಾಗಿದ್ದು, ಈಗಾಗಲೇ 251.54 ಹೆಕ್ಟೇರ್ ಭೂಸ್ವಾಧೀನ ಮಾಡಲಾಗಿದೆ. ಉಳಿದಂತೆ 15.02 ಹೆಕ್ಟೇರ್ ಭೂಸ್ವಾಧೀನ ಶೀಘ್ರವೇ ಪೂರ್ಣಗೊಳ್ಳಲಿದೆ. ಅಲ್ಲದೆ ಉಪ್ಪಿನಂಗಡಿಯಿಂದ ಗುಂಡ್ಯವರೆಗೆ ಸುಮಾರು 700 ಮರಗಳನ್ನು ಕಡಿಯಬೇಕಾಗಿದ್ದು, 4500 ಮರಗಳನ್ನು ಈಗಾಗಲೇ ಕಡಿಯಲಾಗಿದೆ ಎಂದರು. ದಿನಕ್ಕೆ 50ರಂತೆ ಮರಗಳನ್ನು ಕಡಿಯಲಾಗುತ್ತಿದೆ. ಇದಕ್ಕೆ ದಿನದ 6ರಿಂದ 7 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದರು.