ಡೈಮಂಡ್ ವ್ಯಾಪಾರದಲ್ಲಿ ಅದಾನಿಯಿಂದ ಸಾವಿರ ಕೋಟಿ ರೂ ತೆರಿಗೆ ವಂಚನೆ

Gautam Adani

ಅಹಮದಾಬಾದ್ : ಗೌತಮ್ ಅದಾನಿ ನೇತೃತ್ವದ ಕಾರ್ಪೋರೇಟ್ ದಿಗ್ಗಜ ಉದ್ಯಮ ಕಟ್ ಮತ್ತು ಪಾಲಿಶ್ ಡೈಮಂಡ್ ವ್ಯಾಪಾರ ವಹಿವಾಟಿನಲ್ಲಿ ಸರ್ಕಾರಕ್ಕೆ 1000 ಕೋಟಿ ರೂ ಮೌಲ್ಯದ ತೆರಿಗೆ ವಂಚನೆ ಮಾಡಿದೆ ಎಂದು ಆದಾಯ ಗುಪ್ತಚರ ಜಾರಿ ನಿರ್ದೇಶನಾಲಯ ಆರೋಪಿಸಿದೆ.

ರಫ್ತು ವ್ಯಾಪಾರಕ್ಕೆ ನೀಡಲಾಗುವ ಉತ್ತೇಜನಕಾರಿ ರಿಯಾಯಿತಿಗಳನ್ನು ಅದಾನಿ ಸಮೂಹ ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯ ನಿಕಟವರ್ತಿಯಾಗಿರುವ ಅದಾನಿ ಈಗಾಗಲೇ ಹಲವಾರು ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸಿದ್ದು ಕೇಂದ್ರ ಹಣಕಾಸು ಸಚಿವಾಲಯ ಉದ್ದೇಶಪೂರ್ವಕವಾಗಿಯೇ ಸುಪ್ರೀಂ ಕೋರ್ಟಿನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

ರಫ್ತು ವ್ಯಾಪಾರವನ್ನು ಉತ್ತೇಜಿಸಲು ಸರ್ಕಾರ ನೀಡುವ ಹಲವು ರಿಯಾಯಿತಿಗಳನ್ನು ಬಳಸಿಕೊಳ್ಳಲು ವಿಶ್ವದಾದ್ಯಂತ ತನ್ನದೇ ಆದ ಹಲವು ತಾತ್ಕಾಲಿಕ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅದಾನಿ ಸಮೂಹ ವರ್ತುಲ ವಹಿವಾಟುಗಳ ಮೂಲಕ ಭಾರತ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

ರಫ್ತು ವ್ಯಾಪಾರದ ಪ್ರಮಾಣವನ್ನು ಕೃತಕವಾಗಿ ಹೆಚ್ಚಾಗಿ ತೋರಿಸುವ ಮೂಲಕ ಸರ್ಕಾರದ ರಿಯಾಯಿತಿಯನ್ನು ಪಡೆಯುವ ಅದಾನಿ ಸಮೂಹದ ಕುತಂತ್ರದಿಂದ ಸಂಸ್ಥೆಗೆ ಸಾಕಷ್ಟು ಲಾಭವಾಗಿದೆ ಎಂದು ಹೇಳಲಾಗಿದೆ.

ಈ ನಿಟ್ಟಿನಲ್ಲಿ ಆದಾಯ ಗುಪ್ತಚರ ನಿರ್ದೇಶನಾಲಯ ಮಾರ್ಚ್ 2007ರಲ್ಲೇ ಅದಾನಿ ಸಮೂಹಕ್ಕೆ ಶೋ ಕಾಸ್ ನೋಟಿಸ್ ಜಾರಿ ಮಾಡಿದ್ದು ಚಿನ್ನದ ಒಡವೆ ಮತ್ತು ಕಟ್ ಹಾಗÀೂ ಪಾಲಿಷ್ ಡೈಮಂಡ್ ವಹಿವಾಟಿನಲ್ಲಿ ಅದಾನಿ ಕಂಪನಿಯ ವಹಿವಾಟು ಹಠಾತ್ತನೆ ಹೆಚ್ಚಳ ತೋರಿಸಿದ್ದರ ಕಾರಣ ಕೇಳಲಾಗಿತ್ತು.

ಸುಪ್ರೀಂಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಅದಾನಿ ಸಮೂಹದ ವಹಿವಾಟು ಶೇ 2000ದಷ್ಟು ಹೆಚ್ಚಳವಾಗಿರುವುದನ್ನು ಸಾಬೀತುಪಡಿಸಲಾಗಿದೆ. ಕಂಪನಿಯ ಶೇ 80ಕ್ಕಿಂತಲೂ ಹೆಚ್ಚಿನ ರಫ್ತು ವ್ಯಾಪಾರ ಡೈಮಂಡನಿಂದಲೇ ಉಂಟಾಗುತ್ತದೆ.

ಈ ವಿಚಾರಣೆಯ ಸಂದರ್ಭದಲ್ಲಿ ನ್ಯಾ ಎ ಕೆ ಸಿಕ್ರಿ ಮತ್ತು ಎಫ್ ನಾರಿಮನ್ ನೇತೃತ್ವದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ನಕಲಿ ದಾಖಲೆಗಳ ಮೂಲಕ ತೆರಿಗೆ ವಂಚಿಸುವ ಉದ್ಯಮಗಳ ವಿರುದ್ಧ ಹರಿಹಾಯ್ದಿದ್ದು ಒಂದೇ ವ್ಯವಹಾರಗಳನ್ನು ಹಲವಾರು ಬಾರಿ ದಾಖಲಿಸುವ ಮೂಲಕ ಅದಾನಿ ಕಂಪನಿ 15 ಸಾವಿರ ಕೋಟಿಗೂ ಹೆಚ್ಚಿನ ರಫ್ತು ವ್ಯಾಪಾರ ದಾಖಲಿಸಿದೆ ಎಂದು ಕಟುವಾದ ಭಾಷೆಯಲ್ಲಿ ಖಂಡಿಸಿದೆ.

ಇದು ಸರ್ಕಾರದ ಯೋಜನೆಗಳ ದುರುಪಯೋಗವಾಗಿದ್ದು ಅದಾನಿ ಎಂಟರ್‍ಪ್ರೈಸಸ್ ಲಿಮಿಟೆಡ್ ಕಂಪನಿ ಈ ನಿಟ್ಟಿನಲ್ಲಿ ಅಪರಾಧಿಯಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 2004-05ರಲ್ಲಿ ಅದಾನಿ ಉದ್ಯಮದ ಒಟ್ಟು ಡೈಮಂಡ್ ರಫ್ತು 1643.02 ದಶಲಕ್ಷ ಡಾಲರುಗಳಷ್ಟಿತ್ತು. ಇವುಗಳ ಪೈಕಿ 1314.19 ದಶಲಕ್ಷ ಡಾಲರ್ ಮೌಲ್ಯದ ಡೈಮಂಡ್ ಎಂಟು ಕಂಪನಿಗಳಿಗೆ ಸರಬರಾಜು ಆಗಿತ್ತು. ಈ ಕಂಪನಿಗಳು ಅದಾನಿ ಉದ್ಯಮವೇ ಸೃಷ್ಟಿಸಿದ ತನ್ನದೇ ಆದ ನಕಲು ಕಂಪನಿಗಳು ಎಂದು ಆದಾಯ ಗುಪ್ತಚರ ಇಲಾಖೆ ಹೇಳಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೂ ನೋಟಿಸ್ ಜಾರಿಮಾಡಲಾಗಿದ್ದು ಹಣಕಾಸು ಸಚಿವಾಲಯದ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ.