ಮಸಾಜ್ ಸೆಂಟರ್ ಹೆಸರಿನಲ್ಲಿ ಅನೈತಿಕ ದಂಧೆ ನಡೆಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಾದ್ಯಂತ ಇತ್ತೀಚಿನ ದಿನಗಳಲ್ಲಿ ನಾಯಿಕೊಡೆಗಳಂತೆ ಆಯುರ್ವೇದಿಕ್ ಥೆರಪಿ ಹೆಸರಿನಲ್ಲಿ ಹುಟ್ಟಿಕೊಂಡಿರುವ ಮಸಾಜ್ ಸೆಂಟರುಗಳ ವಿರುದ್ಧ ನಗರ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಉಳ್ಳಾಲದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿರುವ ಹಿಂದೆ ಇಂತಹ ಮಸಾಜ್ ಸೆಂಟರ್ ನಂಟು ಇದೆ ಎಂದೂ ಹೇಳಲಾಗಿದೆ. ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಹಲವು ಮಂದಿ ಯುವತಿಯರು ನಗರ ಪ್ರದೇಶಕ್ಕೆ ಬಂದು ಇಲ್ಲಿ ಇಂತಹ ನಿಗೂಢ ಜಾಲದ ಕಪಿಮುಷ್ಠಿಗೆ ಸಿಲುಕಿ ಅದರಿಂದ ಹೊರಬರಲಾಗದ ಅಸಹಾಯಕ ಸ್ಥಿತಿಯನ್ನೂ ತಲುಪಿದವರಿದ್ದಾರೆ.

ಬಡತನದ ಲಾಭವೆತ್ತಿಕೊಳ್ಳುತ್ತಿರುವ ಕೆಲವು ಮಸಾಜ್ ಸೆಂಟರುಗಳ ಮಾಲಕರು ಇಂತಹ ಅಮಾಯಕ ಬಡ ಹೆಣ್ಣುಮಕ್ಕಳನ್ನು ಮಸಾಜ್ ಸೆಂಟರುಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಸಿಕೊಂಡು ಕ್ರಮೇಣ ಅವರನ್ನು ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಾರೆ ಎನ್ನುವ ಆರೋಪಗಳೂ ಕೇಳಿಬಂದಿವೆ.

ಆಯುರ್ವೇದಿಕ್ ಮಸಾಜ್ ಸೆಂಟರುಗಳಿಗೆ ಪರವಾನಿಗೆ ಪಡೆದುಕೊಳ್ಳುವ ಕೆಲವು ನಕಲಿ ತಜ್ಞರು ಬಳಿಕ ಇಂತಹ ಕೇಂದ್ರಗಳನ್ನು ದಂಧೆಗಳಿಗಾಗಿ ಪರಿವರ್ತನೆ ಮಾಡುತ್ತಿದ್ದಾರೆ.

ನಗರದಲ್ಲಿ ಸುಮಾರು 25ಕ್ಕೂ ಅಧಿಕ ಇಂತಹ ಮಸಾಜ್ ಸೆಂಟರುಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ.

ಪೊಲೀಸರ ಕೃಪಾಕಟಾಕ್ಷ

ಇನ್ನು ಕೆಲವರು ಆರೋಪಿಸುವಂತೆ ಆಯಾ ಠಾಣಾವ್ಯಾಪ್ತಿಗೊಳಪಡುವ ಪೊಲೀಸ್ ಠಾಣಾಧಿಕಾರಿಗಳ ಕೃಪಾಕಟಾಕ್ಷದಡಿ ಇಂತಹ ಮಸಾಜ್ ಸೆಂಟರುಗಳು ರಾಜಾರೋಷವಾಗಿ ನಡೆಯುತ್ತಿವೆ. ಕೆಲವು ಠಾಣೆಗಳ ಅಧಿಕಾರಿಗಳಿಗೆ ಪ್ರತೀ ಸೆಂಟರಿನಿಂದ ಪ್ರತೀ ತಿಂಗಳು ರೂ 2 ಲಕ್ಷಕ್ಕೂ ಅಧಿಕ `ಕಪ್ಪ’ ಸಂದಾಯವಾಗುತ್ತಿದೆಯಂತೆ. ಕಪ್ಪ ಸಂದಾಯವಾಗದೇ ಇದ್ದಾಗ ದಾಳಿ ಅನ್ನೋ ಅಸ್ತ್ರವನ್ನು ಪ್ರಯೋಗಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ.