ಕಾಪು ತಾಲೂಕು ಆಗ್ರಹಿಸಿ ಹೋರಾಟ ಸಮಿತಿ ಪಾದಯಾತ್ರೆಯಲ್ಲಿ ಪದಾಧಿಕಾರಿಗಳೇ ಗೈರು !

ಹೆಜಮಾಡಿಯಿಂದ ಕಾಪು ಹೋರಾಟ ಸಮಿತಿ ಪಾದಯಾತ್ರೆ ಆರಂಭಗೊಂಡಿತು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಾಪು ತಾಲೂಕು ಆಗಬೇಕೆಂದು ಒತ್ತಾಯಿಸಿ ಹೆಜಮಾಡಿಯಿಂದ ಕಾಪು ಕ್ಷೇತ್ರದ ಗಡಿಭಾಗ ಉದ್ಯಾವರದವರಗೆ ಕಾಪು ಹೋರಾಟ ಸಮಿತಿ ಆಯೋಜಿಸಿದ ಪಾದಯಾತ್ರೆಗೆ ಬಹಳಷ್ಟು ಮಂದಿ ಸೇರಿದ್ದರೂ ಏಕ ಪಕ್ಷೀಕವಾಗಿಯೇ ನಡೆಯಿತೋ ಎಂಬಂತೆ ಸ್ವತಃ ಬಿಜೆಪಿ ಬೆಂಬಲಿತ ಹೋರಾಟ ಸಮಿತಿಯ ಪದಾಧಿಕಾರಿಗಳೇ ಗೈರಾಗುವ ಮೂಲಕ ತಾಲೂಕು ಹೋರಾಟ ಸಮಿತಿಯಲ್ಲಿ ಎಲ್ಲಾವೂ ಸರಿಯಾಗಿಲ್ಲ ಎಂಬುದನ್ನು ಜನರ ಮುಂದೆ ಬಿಚ್ಚಿಟ್ಟಂತಾಗಿದೆ.

ಯಾವುದೇ ಪಕ್ಷದಲ್ಲಿ ಕಾಣಿಸಿಕೊಳ್ಳದ ಸಮಾಜ ಸೇವಕ ಲೀಲಾಧರ ಶೆಟ್ಟಿ ನೇತೃತ್ವದಲ್ಲಿ ಈ ಪಾದಯಾತ್ರೆ ಆಯೋಜಿಸಲಾಗಿದೆಯಾದರೂ, ಈ ತಾಲೂಕು ಹೋರಾಟದ ಹಿಂದಿರುವ ಶಕ್ತಿ ಶಾಸಕ ಸೊರಕೆ ಎಂಬ ನಿಟ್ಟಿನಲ್ಲೊ ಏನೊ ಇತರೇ ಪಕ್ಷದ ಪ್ರಮುಖರಾಗಲೀ, ಕಾರ್ಯಕರ್ತರಾಗಲೀ ವಿರಳವಾಗಿದ್ದರು.

ತಾಲೂಕು ಹೋರಾಟ ಸಮಿತಿ ರಚನೆಗಾಗಿ ಕರೆದ ಸಭೆಯಲ್ಲಿ ಬಿಜೆಪಿ ಪಕ್ಷದ ಪ್ರಮುಖರನೇಕರು ಭಾಗವಹಿಸಿ ಹೋರಾಟ ಸಮಿತಿಯ ಕಾರ್ಯದರ್ಶಿ, ಕೋಶಾಧಿಕಾರಿ ಸಹಿತ ಪ್ರಮುಖ ಹುದ್ದೆಗಳನ್ನು ಸ್ವೀಕರಿಸಿದರೂ ಅವರು ಈ ಪಾದಯಾತ್ರೆಯಲ್ಲಿ ಭಾಗವಹಿಸದಿರುವುದು ಬಹಳಷ್ಟು ಸಂಶಯಕ್ಕೆ ಎಡೆಮಾಡಿದೆ.

“ತಾಲೂಕು ರಚನೆಯಿಂದ ನಮ್ಮ ಕ್ಷೇತ್ರದ ಜನತೆಗೆ ಏನು ಲಾಭವಾಗಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದ ಬಿಜೆಪಿಗರು, ಇದನ್ನು ರಾಜಕೀಯವಾಗಿ ಅರ್ಥೈಸಿಕೊಂಡು ಇದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಲಾಭವಾಗಲಿದೆ ಎಂಬುದಾಗಿ ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ” ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಈ ಪಾದಯಾತ್ರೆಯಲ್ಲಿ ಪ್ರಮುಖವಾಗಿ ನವೀನಚಂದ್ರ ಜೆ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಗುಲಾಂ ಮಹಮ್ಮದ್, ವೈ ದೀಪಕಕುಮಾರ್, ವಿನಯ ಬಲ್ಲಾಳ್, ವಿಶ್ವಾಸ್ ಅಮೀನ್, ದಿವಾಕರ್ ಶೆಟ್ಟಿ, ಲೀಲಾಧರ ಶೆಟ್ಟಿ ಮುಂತಾದವರಿದ್ದರು.

ಕಾಂಗ್ರೆಸ್ಸಿಗರೇ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ ಈ ಪಾದಯಾತ್ರೆಯಲ್ಲಿ ಸುಮಾರು ಮೂನ್ನೂರರಿಂದ ಮೂನ್ನೂರೈವತ್ತು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಪಾದಯಾತ್ರೆಯ ಮಧ್ಯೆ ಮಧ್ಯೆ ಅನೇಕರು ಜಾರಿಕೊಂಡರೂ ಶಾಸಕ ಸೊರಕೆ ಪಾದಯಾತ್ರೆಯುದ್ಧಕ್ಕೂ ಇದ್ದರು.