ರಕ್ಷಿತಾರಣ್ಯದಲ್ಲಿ ಮರಗಳ್ಳತನ ವಿರುದ್ಧ ಕಠಿಣ ಕ್ರಮ ಭರವಸೆ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ರಕ್ಷಿತಾರಣ್ಯದಲ್ಲಿ ಮರ ಕಳ್ಳತನಗೈದರೆ, ಮರ ಕಳ್ಳರೊಂದಿಗೆ ಸೇರಿ ಇಲಾಖೆಗೆ ದ್ರೋಹ ಬಗೆದರೆ ಆ ಪ್ರದೇಶದ ಅರಣ್ಯ ರಕ್ಷಕರನ್ನು ನೇರ ಹೊಣೆ ಮಾಡಲಾಗುವುದು ಎಂದು ಪುತ್ತೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ತಿಳಿಸಿದ್ದಾರೆ.

ಮರಗಳ್ಳರಿಂದ ನೇರೆಂಕಿಮಲೆಯಲ್ಲಿ ಸಾಗುವಾನಿ ಮರಗಳ ಮಾರಣ ಹೋಮ ಆಗುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಬಳಿ ಅರಣ್ಯ ಇಲಾಖೆಯ ಉಪ್ಪಿನಂಗಡಿಯ ವಲಯ  ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.   “ಮರ ಕಳ್ಳತನಗಳ ಬಗ್ಗೆ ಸಾರ್ವಜನಿಕರರಿಂದ ಮತ್ತು ಪತ್ರಿಕೆಗಳಲ್ಲಿ ದೂರುಗಳು ವ್ಯಕ್ತವಾದಲ್ಲಿ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಅರಣ್ಯ ಲೂಟಿ ತಡೆಯಲು ಇಲಾಖಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಮತ್ತೂ ಇದು ಮುಂದುವರಿದರೆ ಅಂತಹ ಸಿಬ್ಬಂದಿಯ ಮೇಲೆ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು. ಮೀಸಲು ಅರಣ್ಯ ಲೂಟಿ ಮಾಡುವವರಿಗೆ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ” ಎಂದು ಅವರು ತಿಳಿಸಿದರು.

ಪುತ್ತೂರು ಎಸಿಎಫ್ ಆಗಿ ಸುಬ್ರಹ್ಮಣ್ಯ ರಾವ್

ಉಪ್ಪಿನಂಗಡಿ : ಪುತ್ತೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸುಬ್ರಹ್ಮಣ್ಯ ರಾವ್ ಅಧಿಕಾರ ಸ್ವೀಕರಿಸಿದ್ದು, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸುಬ್ರಹ್ಮಣ್ಯ ರಾವ್‍ರವರು ಕರಾವಳಿ ನಿಯಂತ್ರಣ ವಲಯ ಮಂಗಳೂರು (ಸಿಆರ್‍ಝಡ್) ಇಲ್ಲಿ ಎ ಸಿ ಎಫ್ ಆಗಿದ್ದರು.