ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಕಠಿಣ ಕ್ರಮ ತೆಗೆದುಕೊಳ್ಳಿ

ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯಗೊಳಿಸಿದ ಮಾದರಿಯಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧವನ್ನೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಬಹುತೇಕ ಚಾಲಕರು ಕಿವಿಗೆ ಮೊಬೈಲ್ ಇಟ್ಟು ತಲೆಯನ್ನು ಒಂದೆಡೆ ವಾಲಿಸಿಕೊಂಡು ವಾಹನ ಚಾಲನೆ ಮಾಡುತ್ತಿರುತ್ತಾರೆ. ಅವರ ಗಮನವೆಲ್ಲ ಮಾತಿನ ಮೇಲೆಯೇ ಇರುವ ಕಾರಣ ಅಪಘಾತಗಳು ಘಟಿಸುವ ಸಾಧ್ಯತೆ ಹೆಚ್ಚು. ಅನೇಕ ಸಂದರ್ಭಗಳಲ್ಲಿ ಸಣ್ಣ ಪ್ರಮಾಣದ ಅವಘಡವಾದರೂ, ಕೆಲವೊಮ್ಮೆ ಪ್ರಾಣಾಂತಿಕ ಅಪಾಯಗಳಾಗುವುದುಂಟು.

ಹಾಗೇ ನಗರದಲ್ಲಿ ಹೆಲ್ಮೆಟ್ ಹಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಪೊಲೀಸರು ವಾಹನ ತಡೆದು ದಂಡ ವಿಧಿಸುತ್ತಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕಾನೂನು ಜಾರಿಗೆ ಬಂದಿಲ್ಲ ಎನ್ನುವ ಅನುಮಾನ ಮೂಡುತ್ತಿದೆ. ಸುರಕ್ಷತಾ ದೃಷ್ಟಿಯಿಂದ ಎಲ್ಲರೂ ಹೆಲ್ಮೆಟ್ ಹಾಕುವುದು ಕಡ್ಡಾಯ ಎನ್ನುವ ಜಾಗೃತಿ ಮೂಡಿಸಿ.

ಮೊಬೈಲ್ ಕಿವಿಗಿಟ್ಟು ಸಾಗುವ ದ್ವಿಚಕ್ರ ವಾಹನ ಸವಾರರ ಚಾಲನೆ ಅತ್ಯಂತ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ನಿಷೇಧ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳು ಬಡಪಾಯಿ ಜೀವಗಳನ್ನು ಉಳಿಸಲಿ.

  • ಸುಜನ್ ನಂತೂರು ಮಂಗಳೂರು