ದೇಸಿ ತಳಿಯ ಅನಾಥ ನಾಯಿ, ಬೆಕ್ಕಿನ ಮರಿ ದತ್ತು ಪಡೆದು ಆಶ್ರಯದಾತರಾಗಿ

ಸಾಂದರ್ಭಿಕ ಚಿತ್ರ

ಎನಿಮಲ್ ಕೇರ್ ಟ್ರಸ್ಟ್ ಮನವಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೇಸಿಗೆ ಕಾಲದಲ್ಲಿ ಮನುಷ್ಯರಿಗೇ ದಾಹ ಹಾಗೂ ತಾಪ ತಾಳದಾಗಿರುವಾಗ ಪಾಪ ಬಡಪ್ರಾಣಿಗಳ ಗತಿಯೇನು ? ಈ ಪ್ರಶ್ನೆಗೆ ಪ್ರಾಣಿ-ಪಕ್ಷಿಗಳ ರಕ್ಷಣೆಯ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಎನಿಮಲ್ ಕೇರ್ ಟ್ರಸ್ಟ್ ಇಂತಹ ಸಂದರ್ಭದಲ್ಲಿ ನಗರದ ಕನಿಷ್ಠ 75 ಸ್ಥಳಗಳಲ್ಲಿ ನೀರಿನ ಪಾತ್ರೆಗಳನ್ನಿಟ್ಟು ಪ್ರಾಣಿ-ಪಕ್ಷಿಗಳ ದಾಹ ತಣಿಸಲು `ವಾಟರ್ ಬೌಲ್ ಡ್ರೈವ್’ ಮೂಲಕ ಪ್ರಯತ್ನಿಸುತ್ತಿದೆ. ತನ್ನ ಇನ್ನೊಂದು ಪ್ರಮುಖ ಯೋಜನೆಯಂಗವಾಗಿ ಟ್ರಸ್ಟ್ ಮೇ 28ರಂದು ಉಚಿತ ರೇಬೀಸ್ ಚುಚ್ಚುಮದ್ದು ಶಿಬಿರ ಹಾಗೂ ದೇಸಿ ನಾಯಿಮರಿಗಳು ಹಾಗೂ ಬೆಕ್ಕಿನಮರಿಗಳ ದತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ಈ ಕಾರ್ಯಕ್ರಮ ನಗರದ ಕುಲಶೇಖರದಲ್ಲಿರುವ ಪಾವ್ಸ್ ವೆಟರ್ನರಿ ಕ್ಲಿನಿಕ್ಕಿನಲ್ಲಿ ಜರುಗಲಿದೆ. ದೇಸಿ ತಳಿಯ ಸುಮಾರು 2ರಿಂದ 3 ತಿಂಗಳು ಪ್ರಾಯದ ನಾಯಿ ಹಾಗೂ ಬೆಕ್ಕಿನ ಮರಿಗಳು ಈ ಕಾರ್ಯಕ್ರಮದಲ್ಲಿ ದತ್ತು ತೆಗೆದುಕೊಳ್ಳುವವರಿಗೆ ಲಭ್ಯವಾಗಲಿದೆ. ಈ ಎಲ್ಲಾ ಪ್ರಾಣಿಗಳನ್ನು ಸಂತಾನಹರಣ ಶಸ್ತ್ರಕ್ರಿಯೆಗೆ ಒಳಪಡಿಸಲಾಗಿರುತ್ತದೆ ಹಾಗೂ ಅವುಗಳಿಗೆ ಹುಳಬಾಧೆ ನಿಯಂತ್ರಣ ಚಿಕಿತ್ಸೆ ಹಾಗೂ ರೇಬೀಸ್ ಚುಚ್ಚುಮದ್ದು ಕೂಡ ನೀಡಲಾಗಿರುತ್ತದೆ ಎಂದು ಟ್ರಸ್ಟ್ ಹೇಳಿದೆ. ಶಿಬಿರದಲ್ಲಿ ಎರಡ್ಮೂರು ತಿಂಗಳಿಗಿಂತ ಹೆಚ್ಚಿನ ಪ್ರಾಯವಾಗಿರುವ ದೇಸಿ ತಳಿಯ ನಾಯಿಗಳೂ ಲಭ್ಯವಿರುತ್ತವೆ ಎಂದು ಹೇಳಿರುವ ಟ್ರಸ್ಟಿನ ಸುಮಾ ನಾಯಕ್ ಸಹೃದಯರು ಮುಂದೆ ಬಂದು ಈ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಮನೆಗಳಲ್ಲಿ ಆಶ್ರಯ ಪಡೆದಿರುವ ಬೆಕ್ಕಿನಮರಿಗಳನ್ನು ಸಾಕುವ ಬದಲು ಅನಾಥ ಬೆಕ್ಕು ಹಾಗೂ ನಾಯಿಮರಿಗಳನ್ನು ದತ್ತು ಪಡೆದು ಸಾಕುವುದು ಒಂದು ಉತ್ತಮ ಕಾರ್ಯವಾಗಬಲ್ಲುದು ಎಂದು ಸುಮಾ ನಾಯಕ್ ಹೇಳುತ್ತಾರೆ.