ತಿಂಗಳ ಸಂಬಳವಿಲ್ಲದೆ ಉ ಕರ್ನಾಟಕದ ಕಟ್ಟಡ ಕಾರ್ಮಿಕರು ಬರಿಗೈಲಿ ಊರಿಗೆ

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೊಡ್ಡ ನೋಟುಗಳ ಅಮಾನ್ಯದ ಹೊಡೆತ ಕಟ್ಟಡ ಕಾರ್ಮಿಕರ ಮೇಲೆ ತೀವ್ರವಾಗಿ ಬಿದ್ದಿದೆ. ದಿನ, ವಾರ ಅಥವಾ ತಿಂಗಳ ಮಜೂರಿಗೆ ಕೆಲಸ ಮಾಡುವ ಅದೆಷ್ಟೋ ಕಾರ್ಮಿಕರಿಗೆ ಕಾಂಟ್ರಾಕ್ಟರುಗಳು ಸಂಬಳ ನೀಡಲು ಅಸಮರ್ಥರಾಗಿದ್ದಾರೆ. ಕಾಂಟ್ರಾಕ್ಟರುಗಳಲ್ಲಿ ಹಣವಿಲ್ಲದೆ ಕಾರ್ಮಿಕರು ಸಂಬಳವಿಲ್ಲದೆ ಮನೆಗೆ ಹಿಂತಿರುಗುವಂತಾಗಿದೆ.

ನಗರದ ವಿವಿಧ ಭಾಗಗಳಲ್ಲಿ ಕಟ್ಟಡ ನಿರ್ಮಾಣ ಮಾಡಿಸುತ್ತಿರುವ ಗುತ್ತಿಗೆದಾರರೊಬ್ಬರ ಕೈಕೆಳಗೆ ಕೆಲಸ ಮಾಡುವ ಅನೇಕ ಮಂದಿಯನ್ನು ಸಂಬಳ ಕೊಡದೆ ಮನೆಗೆ ಕಳುಹಿಸುವಂತಾಗಿದೆ. ಹೆಚ್ಚುಕಡಿಮೆ ಸುಮಾರು 30 ಕೆಲಸಗಾರರು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದು, ಹೆಚ್ಚಿನವರೆಲ್ಲಾ ಉತ್ತರ ಕರ್ನಾಟಕದವರಾಗಿದ್ದಾರೆ. ಕಾರ್ಮಿಕರು ಬ್ಯಾಂಕ್ ಖಾತೆ ಹೊಂದಿಲ್ಲ ಹಾಗಾಗಿ ಎಲ್ಲರಿಗೂ ನಗದು ರೂಪದಲ್ಲಿ ಹಣ ಪಾವತಿಸಬೇಕಾಗಿದೆ. ಈಗಾಗಲೇ ಸುಮಾರು 23 ಮಂದಿ ಸಂಬಳವಿಲ್ಲದೆ ತಮ್ಮ ಊರಿಗೆ ತೆರಳಿದ್ದಾರೆ, ಉಳಿದವರೂ ಹಾಗೆಯೇ ತೆರಳುವವರಿದ್ದಾರೆ ಎಂದು ಆ ಗುತ್ತಿಗೆದಾರ ತಿಳಿಸಿದ್ದಾರೆ.

ಇದು ಅದೆಷ್ಟೋ ಕಟ್ಟಡ ನಿರ್ಮಾಪಕರ ಕೈಗೆಳಗೆ ಕೆಲಸ ಮಾಡುವ ಕಾರ್ಮಿಕರ ಗೋಳಾಗಿದೆ. ಕಂಪೆನಿಯ ಬ್ಯಾಂಕ್ ಖಾತೆಯಲ್ಲಿ ಹಣವಿದೆ. ಆದರೆ ವಿತ್ ಡ್ರಾ ಮಾಡಲಾಗುತ್ತಿಲ್ಲ. ವಾರಾಂತ್ಯಕ್ಕೆ ಅಥವಾ ತಿಂಗಳಾಂತ್ಯಕ್ಕೆ ನಾವು ಸಂಬಳ ಪಾವತಿಸಬೇಕಾಗಿದೆ. ಆದರೆ ಇಂದಿನ ದಿನಗಳಲ್ಲಿ ಅವರ ಸಂಬಳದ ಅರ್ಧವನ್ನೂ ಪಾವತಿ ಮಾಡಲಾಗುತ್ತಿಲ್ಲ. ನಗದು ವಿತ್ ಡ್ರಾ ಮೇಲೆ ಸರ್ಕಾರ ವಿಧಿಸಿರುವ ಮಿತಿಯನ್ನು ಮುಕ್ತಗೊಳಿಸದ ವಿನಃ ನಾವು ಮುಂದಿನ ದಿನಗಳಲ್ಲಿ ಸಂಬಳ ಪಾವತಿಸುವುದೇ ಸಾಧ್ಯವಿಲ್ಲದಂತಾಗುತ್ತದೆ ಎಂದು ಕಟ್ಟಡ ನಿರ್ಮಾಣ ಕಂಪೆನಿಗಳ ವ್ಯವಸ್ಥಾಪಕರು ಹೇಳಿದ್ದಾರೆ.

ದೊಡ್ಡ ನೋಟುಗಳ ಅಮಾನ್ಯದ ಒಂದೆರಡು ವಾರಗಳವರೆಗೆ ನಾವು ಅದೇ ಹಳೆ ನೋಟುಗಳಲ್ಲಿ ಸಂಬಳ ಪಾವತಿಸುತ್ತಿದ್ದೆವು. ಆದರೆ ಈಗ ಸಂಬಳ ಪಾವತಿಸುವುದೇ ಅಸಾಧ್ಯವಾಗಿದೆ. ಕೆಲವು ಕೆಲಸಗಾರರ ಹೆಂಡತಿ ಮಕ್ಕಳು ಬ್ಯಾಂಕ್ ಖಾತೆಗಳನ್ನು ಹೊಂದಿದವರಿದ್ದಾರೆ. ಆದರೆ ನಾವು ಅವರ ಖಾತೆಗಳಿಗೆ ಹಣ ಪಾವತಿಸುವುದೂ ಅಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಇದರಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಎಂದು ಕಟ್ಟಡ ನಿರ್ಮಾಣ ಸೈಟ್ ಮೇಲ್ವಿಚಾರಕರೊಬ್ಬರು ತಿಳಿಸಿದ್ದಾರೆ.