ಕೊಲೆಗೆ ಫಂಡಿಂಗ್ ಮಾಡಿದ್ದ ಆರೋಪಿ ಪಿಂಟೊಗೆ ಜಾಮೀನು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ:  ಹಿರಿಯಡ್ಕ ಸಮೀಪದ ರೌಡಿ ಶೀಟರ್ ವರ್ವಾಡಿ ಪ್ರವೀಣ್ ಕುಲಾಲ್ ಕೊಲೆ ಪ್ರಕರಣದಲ್ಲಿ ಹಣಕಾಸಿನ ಸಹಾಯ ಮಾಡಿದ್ದಾನೆ ಎನ್ನಲಾದ ಆರೋಪಿಯೊರ್ವನಿಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಲಯವು ಬುಧವಾರ ಜಾಮೀನು ನೀಡಿದೆ. ಕೊಲೆ ಪ್ರಕರಣದ ಆರೋಪಿ ಉಡುಪಿ ನಗರದ ಹೊರವಲಯದ ಸಂತೆಕಟ್ಟೆ ನಿವಾಸಿ ಸುಜಿತ್ ಪಿಂಟೋ (32) ಜಾಮೀನಿಂದ ಹೊರಬಂದಿದ್ದಾನೆ.

ರೌಡಿ ಶೀಟರ್ ಪ್ರವೀಣ್ ಕುಲಾಲನ್ನು ಆರೋಪಿಗಳಾದ ಹಿರಿಯಡ್ಕ ಸಮೀಪದ ಪುತ್ತಿಗೆ ಸಂತು, ಮಾಂಬೆಟ್ಟು ಸಂತು ಹಾಗೂ ಪಡುಬಿದ್ರಿ ಸಮೀಪದ ಪಲಿಮಾರಿನ ಲತೀಶ್ ಪೂಜಾರಿ 2016, ಡಿಸೆಂಬರ್ 19 ರಂದು ಹಿರಿಯಡ್ಕ ಸಮೀಪದ ಕೋಟ್ನಕಟ್ಟೆ ಬಾರ್ ಬಳಿ ತಲವಾರಿನಿಂದ ಕೊಚ್ಚಿ ಕೊಲೆಗೈದಿದ್ದು, ಕಾರವಾರ ಜೈಲಿನಲ್ಲಿದ್ದಾರೆ.

ಪೆರ್ಡೂರು ಸಮೀಪದ ದೊಡ್ಡೆರಂಗಡಿ ಮರದ ವ್ಯಾಪಾರಿಯೊಬ್ಬರನ್ನು ಕೊಲೆಗೈದು ಜೀವವಾಧಿ ಶಿಕ್ಷೆಗೊಳಗಾಗಿ ಬೆಳಗಾವಿ ಜೈಲಿನಲ್ಲಿರುವ ದೊಡ್ಡೆರಂಗಡಿ ನಿವಾಸಿ ಸಂತು ಯಾನೆ ಸಂತೋಷ್ ಪೂಜಾರಿ ಎಂಬಾತನ್ನು ವರ್ವಾಡಿ ಪ್ರವೀಣ್ ಕುಲಾಲ್ ಕೊಲೆ ನಡೆಸಲು ಸಂಚು ರೂಪಿಸಿರುವುದರಿಂದ ಪ್ರವೀಣ್‍ನ ಹತ್ಯೆಯನ್ನು ಜೈಲಿನಲ್ಲಿದ್ದುಕೊಂಡೇ ಸಂತು ಮಾಡಿಸಿರುವುದು ತನಿಖೆಯಿಂದ ಗೊತ್ತಾಗಿರುವುದರಿಂದ ಸಂತು ವಿರುದ್ಧವೂ ಕೇಸು ದಾಖಲಾಗಿತ್ತು. ಪ್ರವೀಣ್ ಕೊಲೆ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳಲ್ಲಿ ಹಣಕಾಸಿನ ಸಹಾಯ ಮಾಡಿದ್ದ ಸುಜಿತ್ ಪಿಂಟೋ ಜಾಮೀನು ಸಿಕ್ಕಿದೆ. ಉಳಿದ ಆರೋಪಿಗಳು ಕಾರವಾರ ಜೈಲಿನಲ್ಲಿದ್ದಾರೆ.