ಕೇಸು ದಾಖಲಾದರೂ ಆರೋಪಿ ಬಂಧನವಿಲ್ಲ

ಮಹಿಳೆಗೆ ಹಲ್ಲೆ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಾಗದ ತಕರಾರಿಗೆ ಸಂಬಂಧಿಸಿ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಆರೋಪಿ ವಿರುದ್ಧ ಉಡುಪಿ ನಗರ ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗಿದ್ದರೂ, ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂಬ ದೂರು ಕೇಳಿಬಂದಿದೆ.

ನಗರದ ಹೊರವಲಯದ ಆಭರಣ ಶೋ ರೂಮ್ ಬಳಿಯ ಕೊಡಂಕೂರು ನ್ಯೂ ಕಾಲೊನಿ ನಿವಾಸಿ ಮಮ್ತಾಜ್ (33) ಹಲ್ಲೆಗೊಳಗಾದವರು. ನೆರೆಮನೆಯ ನಿವಾಸಿ, ಪೈಂಟಿಂಗ್ ಕೆಲಸ ಮಾಡುವ ಮೂಲತಃ ತಮಿಳುನಾಡು ಮೂಲದ ಮಂಜುನಾಥ(36) ಆರೋಪಿ. ಈತನು ಜಾಗದ ತಕರಾರಿಗೆ ಸಂಬಂಧಿಸಿ ನೆರೆಮನೆಯ ಮಮ್ತಾಜಗೆ ಬುಧವಾರ ಸಂಜೆ ಹಲ್ಲೆ ನಡೆಸಿದ್ದಲ್ಲದೇ, ಗುರುವಾರ ಸಹಚರರನ್ನು ಕರೆದುಕೊಂಡು ಬಂದು, ತಾಯಿ-ಮಗಳನ್ನು ರೇಪ್ ಮಾಡಿ ಕೊಲೆಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಮಮ್ತಾಜ್ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಮಂಜುನಾಥ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ಮಮ್ತಾಜ್ ಆರೋಪಿಸಿದ್ದಾರೆ.