ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಕಿನ್ನಿಮುಲ್ಕಿ ಸಮೀಪದ ಕನ್ನರಪಾಡಿ ರಿಕ್ಷಾ ನಿಲ್ದಾಣ ಬಳಿ ಗುರುವಾರ ಸಂಜೆ ರಸ್ತೆ ದಾಟಲು ಡಿವೈಡರಿನಲ್ಲಿ ನಿಂತಿದ್ದ ಎಂಜಿಎಮ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಸ್ಮಿತ ಎ ಸುವರ್ಣಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಆಕೆಯು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿದ್ದ ಆಕೆಯು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ.

ಆಕೆಯ ಎರಡು ಕಣ್ಣುಗಳನ್ನು ಮನೆಯವರು ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಗರದ ಸೈಂಟ್ ಸಿಸಿಲೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದ ಅಸ್ಮಿತ ಸುವರ್ಣ ಎಸ್ಸೆಸ್ಸೆಲ್ಸಿಸಿಯಲ್ಲಿ ಶೇಕಡಾ 95.36 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಳು. ಈ ಬಗ್ಗೆ ತಂದೆ ಅಶೋಕ ಅಂಚನ್ ನೀಡಿದ ದೂರಿನಂತೆ ಆಕೆಯ ಸಾವಿಗೆ ಕಾರಣನಾದ ಆರೋಪಿ ಉಡುಪಿ ನಗರದ ಕಡಿಯಾಳಿಯ ಓಷ್ಯನ್ ಪರ್ಲ್ ಹೋಟೆಲಿಗೆ ಸೇರಿದ ಕಾರು ಚಾಲಕ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.


ಅನಾಥವಾಗಿದ್ದ ಮೂಗಗೆ ರಕ್ಷಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಅಡ್ಕದಲ್ಲಿ ರಸ್ತೆ ಮಧ್ಯದ ವಿಭಾಜಕದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಮೂಗ ವ್ಯಕ್ತಿಯನ್ನು ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಮತ್ತು ಸ್ನೇಹಿತರು ಸೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ.

ಕೋಟೆಕಾರು ಅಡ್ಕದ ಹೆದ್ದಾರಿ ನಡುವಿನ ವಿಭಾಜಕದಲ್ಲಿ ಕಳೆದ ಮೂರು ದಿನಗಳಿಂದ ಈ ವ್ಯಕ್ತಿ ಅಸ್ವಸ್ಥಗೊಂಡಿರುವುದನ್ನು ಕಂಡ ಸ್ಥಳೀಯ ಕಾರು ಚಾಲಕ ಸಂತೋಷ್ ಪ್ಲಾಸ್ಟಿಕ್ ಹೊದಿಕೆ ತಂದು ಅವರಿಗೆ ನೀಡಿದ್ದರು. ಬಳಿಕ ಸ್ನೇಹಿತರಾದ ತಾ ಪಂ ಸದಸ್ಯ ರವಿಶಂಕರ್ ಮತ್ತು ಮಾಜಿ ಗ್ರಾ ಪಂ ಸದಸ್ಯ ಸಾರಥಿ ಅವರನ್ನು ಸ್ಥಳಕ್ಕೆ ಕರೆಯಿಸಿ ಉಪಚರಿಸಿದ್ದಾರೆ. 108 ವಾಹನವನ್ನು ಕರೆಸಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರು.