ಬೈಕ್ ಸ್ಕಿಡ್ಡಾಗಿ ಗಾಯಗೊಂಡವ ಚಿಕಿತ್ಸೆ ಫಲಕಾರಿಯಾಗದೆ ಸಾವು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಕೊಲೆಕಾಡಿ ಬಳಿ ಬೈಕು ಸ್ಕಿಡ್ ಆಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ  ಪಂಜಿನಡ್ಕ ಬಳಿಯ ನಿವಾಸಿ ಹರೀಶ್ ರಾಜ್ ಹೆಗ್ಡೆ (36) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ಹರೀಶ್ ಮಂಗಳೂರಿನ ಬಂದರಿನಲ್ಲಿ ಹೋಟೇಲು ನಡೆಸುತ್ತಿದ್ದು ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಾಸು ಬೈಕಿನಲ್ಲಿ ಬರುತ್ತಿದ್ದ ವೇಳೆ ಬೈಕು ಸ್ಕಿಡ್ ಆಗಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು.

ಮದುವೆಯಾಗಿ ಕೇವಲ ಒಂದುವರೆ ವರ್ಷವಾಗಿರುವ ಹರೀಶ್ ಕಳೆದ ದಿನದ ಹಿಂದೆ  ಶಬರಿಮಲೆ ಯಾತ್ರೆ ಮುಗಿಸಿ ಬಂದಿದ್ದರು. ಮಾಜಿ ಸಚಿವ ಅಭಯಚಂದ್ರ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ದನಂಜಯ ಮಟ್ಟು, ಕಿಶೋರ್ ಶೆಟ್ಟಿ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಸ್ಥಳೀಯ ಪಂಚಾಯತಿ ಸದಸ್ಯ ಹರೀಶ್ ಶೆಟ್ಟಿ, ಮನೋಹರ ಕೋಟ್ಯಾನ್ ಸಹಿತ ಸಾವಿರಾರು ಮಂದಿ ಮೃತನ ಅಂತಿಮಕ್ರಿಯೆಯಲ್ಲಿ ಬಾಗವಹಿಸಿದ್ದರು.

ಪಂಜಿನಡ್ಕ ನಿವೃತ್ತ ಶಿಕ್ಷಕ ಶಾಂತಾರಾಮ ಹೆಗ್ಡೆ ಕಸ್ತೂರಿಯವರ ಮೂವರು ಮಕ್ಕಳಲ್ಲಿ ಏಕೈಕ ಮಗನನ್ನು ಕಳೆದು ಕೊಂಡ ಮೃತನ ಮನೆ ಹಾಗೂ ಊರಿಗೆ ಊರೇ ಶೋಕಸಾಗರದಲ್ಲಿ ಮುಳುಗಿದೆ. ಹರೀಶ್ ರಾಜ್ ಹೆಗ್ಡೆಯವರ ಜನ್ಮ ದಿನವೂ ಇದೇ ಭಾನುವಾರ ಆಗಿದ್ದು ಪಂಜಿನಡ್ಕ ಸಮೀಪದ ಭಜನಾ ಮಂದಿರಲ್ಲಿ ಶನಿವಾರ ಏಕಾದಶಿ ನಿಮಿತ್ತ ಭಜನಾ ಪೂಜೆಗೆ ಹರೀಶ್ ಮನೆಯವರಎಲ್ಲವೂ ಸಿದ್ದತೆ ನಡೆದಿತ್ತು.