6 ಲಕ್ಷ ರೂ ಸಹಿತ ಕೋಟ್ಯಂತರ ಮೌಲ್ಯದ ಆಸ್ತಿ, ಚಿನ್ನಾಭರಣ ವಶ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಬೆಳ್ತಂಗಡಿ ತಹಶೀಲ್ದಾರ್ ಕಚೇರಿ ಮೇಲ್ವಿಚಾರಕ ಗೋವಿಂದ ನಾಯ್ಕರ ಮನೆಗೆ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಹಚ್ಚಿದ್ದು, ಚಿನ್ನಾಭರಣ ಮತ್ತು ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗುರುವಾಯನಕೆರೆ ಕುವೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಹವ್ಯಕ ಭವನದ ಬಳಿ ಇರುವ ಬೆಳ್ತಂಗಡಿ ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕರಾಗಿರುವ ಗೋವಿಂದ ನಾಯ್ಕ್ ಮನೆಯಲ್ಲಿದ್ದ ಸಂದರ್ಭದಲ್ಲಿ ಮುಂಜಾನೆ 6 ಗಂಟೆಗೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.

ನಗದು ಹಣ, ದಾಖಲೆ ಪತ್ರಗಳು, 2000 ರೂ ಮುಖಬೆಲೆಯ ಹೊಸ ನೋಟುಗಳು, 50 ಮತ್ತು 100ರ ನೋಟುಗಳು ಸೇರಿದಂತೆ ಒಟ್ಟು 6 ಲಕ್ಷ ರೂ ನಗದು ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ಠೇವಣಿ ಪತ್ರಗಳು, ತಾಲೂಕು ಕಚೇರಿಯಲ್ಲಿರಬೇಕಾದ ಕೆಲವು ಮುಖ್ಯ ಕಡತಗಳನ್ನು ಕೂಡಾ ಮನೆಯಿಂದ ವಶಪಡಿಸಿಕೊಂಡಿದ್ದಾರೆ.

ಪುತ್ತೂರು, ವಿಟ್ಲಕ್ಕೆ ವರ್ಗಾವಣೆಗೊಂಡಿದ್ದರೂ ಗೋವಿಂದ ನಾಯ್ಕ್ ತನ್ನ ಪ್ರಭಾವವನ್ನು ಬೀರಿ ಬೆಳ್ತಂಗಡಿ ತಾಲೂಕು ಕಚೇರಿಗೆ ವರ್ಗಾವಣೆ ಪಡೆದುಕೊಂಡಿದ್ದರು. ಇವರ ಪತ್ನಿ ಲೀಲಾವತಿ ಪುಂಜಾಲಕಟ್ಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿಯರಾಗಿ ಕೆಲಸ ಮಾಡುತ್ತಿದ್ದಾರೆ.