ತನಿಖೆಯನ್ನೇ ನಡೆಸದೆಯೇ 20 ಕೇಸ್ ಕೈಬಿಟ್ಟ ಎಸಿಬಿ

ನಮ್ಮ ಪ್ರತಿನಿಧಿ ವರದಿ

ಬೆಂಗಳೂರು : ರಾಜ್ಯ ಸರಕಾರ ಹಲವು ವಿರೋಧಗಳ ನಡುವೆ ಕಳೆದ  ವರ್ಷದ ಮಾರ್ಚ್ ತಿಂಗಳಲ್ಲಿ ಸ್ಥಾಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಯಾವುದೇ ತನಿಖೆ ನಡೆಸದೆ 20 ಪ್ರಕರಣಗಳನ್ನು ಕೈಬಿಟ್ಟಿದೆ. ಇದರ ಹೊರತಾಗಿ 63 ಪ್ರಕರಣಗಳನ್ನು ಸಾಕ್ಷ್ಯಾಧಾರಗಳ ಕೊರತೆ ಯಾ ಸುಳ್ಳು ಪ್ರಕರಣಗಳು ಎಂಬ ಆಧಾರದಲ್ಲಿಯೂ ಸಂಸ್ಥೆ ತನಿಖೆ ನಡೆಸಿಲ್ಲ.

2016ರ ನ್ಯಾಷನಲ್  ಕ್ರೈಮ್ ರೆಕಾಡ್ರ್ಸ್ ಬ್ಯುರೋ ಅಂಕಿ-ಅಂಶಗಳ ಪ್ರಕಾರ ಎಸಿಬಿಯ ಮುಂದೆ 754 ಪ್ರಕರಣಗಳು ತನಿಖೆಗೆ ಬಾಕಿಯಿದ್ದು ಇಲ್ಲಿಯ ತನಕ ಅದು 20 ಪ್ರಕರಣಗಳನ್ನು ಒಂದೋ ಕೈಬಿಟ್ಟಿದೆ ಇಲ್ಲವೇ ತನಿಖೆ ನಡೆಸಿಲ್ಲ. ಇಪ್ಪತ್ತೊಂಬತ್ತು ರಾಜ್ಯಗಳ ಪೈಕಿ 20ರಷ್ಟು ಪ್ರಕರಣಗಳ ವಿಚಾರಣೆ ನಡೆಸದೆಯೇ ಕೈಬಿಟ್ಟ ಏಕೈಕ ರಾಜ್ಯ ಕರ್ನಾಟಕವಾಗಿದೆ. ಉಳಿದಂತೆ ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರ ತಲಾ ಒಂದು ಪ್ರಕರಣ ಕೈಬಿಟ್ಟಿವೆ.

ಆದರೆ ಕರ್ನಾಟಕದ ಎಸಿಬಿ ವಿಚಾರಣೆ ನಡೆಸದೆಯೇ ಕೈಬಿಟ್ಟ ಪ್ರಕರಣಗಳು ಬಗ್ಗೆ ಬೇರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.