ಪ್ರಕರಣ ಬೇಗ ಇತ್ಯರ್ಥಗೊಳಿಸಲು ಒತ್ತಾಯ

ಶಿಮಂತೂರು ರಸ್ತೆ ತಡೆ ಪ್ರಕರಣ ಸ್ಥಳಕ್ಕೆ ಮಂಗಳೂರು ಏಸಿ ಭೇಟಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಳೆದ ಕೆಲ ತಿಂಗಳಿನಿಂದ ಸ್ಥಳೀಯ ವ್ಯಕ್ತಿಯೊಬ್ಬರ ಮತ್ತು ಶಿಮಂತೂರು ದೇವಳದ ಆಡಳಿತ ಮಂಡಳಿಯ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟದಿಂದ ಅಂಗರಗುಡ್ಡೆ ಶಿಮಂತೂರು ರಸ್ತೆ ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದ ಬಗೆಹರಿಸಲು ಮಂಗಳೂರು ಏಸಿ ರೇಣುಕಾಪ್ರಸಾದ ಭೇಟಿ ನೀಡಿದರು.

ಎರಡು ದೂರುದಾರರ ಕಡತಗಳನ್ನು ಪರಿಶೀಲಿಸಿ ಹೇಳಿಕೆಗಳನ್ನು ಪಡೆದುಕೊಳ್ಳುವಾಗ ದೇವಳದ ಆಡಳಿತ ಮಂಡಳಿಯ ಮೊಕ್ತೇಸರರರು ಗೈರಾಗಿದ್ದು, ಸ್ಥಳದಲ್ಲಿ ಮಾತಿನ ಚಕಮಕಿ ನಡೆಯಿತು.

ಬೆಳಗ್ಗೆ ಸುಮಾರು 10 ಗಂಟೆಗೆ ರೇಣುಕಾಪ್ರಸಾದ್ ವಿವಾದ ಜಾಗವನ್ನು ಪರಿಶೀಲಿಸಿದಾಗ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ವಿಜಯಕುಮಾರ್ ಶೆಟ್ಟಿ ಎಂಬವರು, “ಕಳೆದ ಕೆಲ ತಿಂಗಳಿನಿಂದ ಅಧಿಕಾರಿಗಳು ವಿವಾದವನ್ನು ಬಗೆಹರಿಸುತ್ತೇನೆಂದು ಅನೇಕ ಸಲ ಬಂದು ಹೋಗಿದ್ದಾರೆ. ಆದರೆ ವಿವಾದ ಬಗೆಹರಿದಿಲ್ಲ ರಸ್ತೆ ತಡೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಕಮಿಷನರ್, “ದೇವಳದ ಆಡಳಿತ ಮಂಡಳಿ ಹಾಗೂ ಸ್ಥಳಿಯ ದೂರುದಾರರಾದ ಸೌಭಾಗ್ಯ ರಾಜೇಶ್ ಹೇಳಿಕೆ ಪಡೆದು ಕೂಡಲೇ ರಸ್ತೆ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು” ಎಂದರು.

ಈ ನಡುವೆ ದೇವಳದ ಆಡಳಿತ ಮಂಡಳಿಯ ಮೊಕ್ತೇಸರರು ಸ್ಥಳದಲ್ಲಿ ಉಪಸ್ಥಿತರಿಲ್ಲದ ಬಗ್ಗೆ ದೇವಳದ ಮ್ಯಾನೇಜರ್ ಬಾಲಕೃಷ್ಣ ಕಾಮತರನ್ನು ಏಸಿ ಪ್ರಶ್ನಿಸಿದಾಗ ನೋಟಿಸು ಸಿಕ್ಕಿದ್ದು ತಡವಾಗಿದೆ ಎಂದರು. ಕೂಡಲೇ ನೋಟಿಸು ತಡವಾದ ಬಗ್ಗೆ ಏಸಿಯವರು ಅತಿಕಾರಿಬೆಟ್ಟು ಪ್ರಭಾರ ವಿಎ ಸುನಿಲರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಒಂದು ಕಡೆಯಿಂದ ಹೇಳಿಕೆ ಪಡೆದುಕೊಂಡು ಆದಷ್ಟು ಬೇಗ ಮುಂದಿನ ದಿನಗಳಲ್ಲಿ ರಸ್ತೆ ತಡೆ ತೆರವುಗೊಳಿಸಲಾಗುವುದು ಎಂದು ಏಸಿ ಹೇಳಿದರು.

ಮುಂದಿನ ದಿನಗಳಲ್ಲಿ ದೇವಳದ ಜಾತ್ರಾಮಹೋತ್ಸವ ನಡೆಯಲಿದ್ದು, ಆದಷ್ಟು ಬೇಗ ರಸ್ತೆ ತೆರವುಗೊಳಿಸುವಂತೆ ಸ್ಥಳೀಯ ಪಂಚಾಯತಿ ಸದಸ್ಯ ಹರೀಶ್ ಶೆಟ್ಟಿ ಹಾಗೂ ಅತಿಕಾರಿಬೆಟ್ಟು ಗ್ರಾ ಪಂ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಕಮಿಷನರನ್ನು ಒತ್ತಾಯಿಸಿದ್ದಾರೆ.