ರಾ ಹೆ 66ರಲ್ಲಿ ಹಾನಿಗೊಳಗಾದ ಜಾಗಗಳ ಶೀಘ್ರ ದುರಸ್ತಿಗೆ ಕಾಂಟ್ರಾಕ್ಟರುಗಳಿಗೆ ಎಸಿ ಸೂಚನೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಹಾನಿಗೊಂಡಿರುವ ಎಲ್ಲಾ ಭಾಗಗಳನ್ನು ಶೀಘ್ರದಲ್ಲಿಯೇ ದುರಸ್ತಿಗೊಳಿಸುವಂತೆ ಸಹಾಯಕ ಕಮಿಷನರ್ ಶಿಲ್ಪಾ ನಾಗ್ ಕಾಂಟ್ರಾಕ್ಟರುಗಳಿಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಒತ್ತಿನೆಣೆ ಸೇರಿದಂತೆ ಹಲವು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಣ್ಣು ಕುಸಿದು ಹಾನಿಗಳು ಉಂಟಾಗಿದ್ದು, ಅವುಗಳನ್ನು ತಕ್ಷಣವೇ ಸರಿಪಡಿಸಿ ಸಂಚಾರಕ್ಕೆ ಸುಗಮಗೊಳಿಸಬೇಕು. ಒಂದು ವೇಳೆÉ ಎಲ್ಲಿಯಾದರೂ ಮಣ್ಣು ಕುಸಿತ ಸಂಭವಿಸಿದರೆ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಪೊಲೀಸರಿಗೆ ಮತ್ತು ತಹಶೀಲ್ದಾರರಿಗೆ ಮತ್ತು ನನಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಗುರುವಾರ ನಡೆದ ಸಭೆಯೊಂದರ ಅಧ್ಯಕ್ಷತೆ ವಹಿಸಿದ್ದ ಅವರು, ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ನಿರ್ವಹಣೆ ಬಗ್ಗೆ ಮಾತನಾಡುತ್ತಾ ಮಳೆಗಾಲದಲ್ಲಿ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವಂತೆ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮತ್ತು ಕಾಂಟ್ರಾಕ್ಟರುಗಳಿಗೆ-ಐಆರ್‍ಬಿ, ಆರ್ ವಿ ಕನಸ್ಟ್ರಕ್ಷನ್ ಮತ್ತು ನವಯುಗ ಕಂಪೆನಿಗಳಿಗೆ ನಿರ್ದೇಶಿಸಬೇಕು ಎಂದು ಅವರು ಹೇಳಿದರು.

ಕುಂದಾಪುರ-ಬೈಂದೂರು ಪ್ರದೇಶದ ಜನತೆ ರಸ್ತೆ ವಿಸ್ತಾರ ಕೆಲಸಗಳಿಂದಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದಿಉಡುಪಿಯಲ್ಲಿ ಹಲವು ಕಡೆಗಳಲ್ಲಿ ರಸ್ತೆ ಮೇಲೆ ಮಣ್ಣು ಕುಸಿದಿದೆ ಎಂದು ಕೆಲ ಫೋಟೋ ಮತ್ತು ವಿಡಿಯೋ ಕ್ಲಿಪ್ಪಿಂಗುಗಳನ್ನು ಪ್ರದರ್ಶಿಸಿದರು.

ಜೂನ್ 7ರಂದು ಒತ್ತಿನೆಣೆಯಲ್ಲಿ ಸಂಭವಿಸಿದ ಮಣ್ಣು ಕುಸಿತದಿಂದಾಗಿ ಸುಮಾರು 5 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿತ್ತು ಮತ್ತು ಬದಲಿ ರಸ್ತೆಯ ಕೊರತೆಯಿಂದಾಗಿ ಅನೇಕ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿತ್ತು ಎಂದು ಅವರು ವಿವರಿಸಿದರು.