ನೌಕರರ ಗೈರಿನಿಂದ ಬೇಳ ಗ್ರಾಮ ಕಚೇರಿ ಮುಚ್ಚುಗಡೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬೇಳ ಗ್ರಾಮ ಕಚೇರಿಗೆ ಬುಧವಾರ ನೌಕರರು ಗೈರು ಹಾಜರಾಗಿರುವುದರಿಂದ ಕಚೇರಿ ಮುಚ್ಚಲಾಗಿತ್ತು. ಇದರಿಂದ ಬೆಳಿಗ್ಗೆ ವಿವಿಧ ಅಗತ್ಯಗಳಿಗೆ ಗ್ರಾಮ ಕಚೇರಿಗೆ ಬಂದವರು ಬರಿಗೈಯಲ್ಲಿ ಮರಳಿದ್ದಾರೆ.

ವಿದ್ಯಾನಗರ ರಸ್ತೆಯ ನೀರ್ಚಾಲಿನಲ್ಲಿ ಕಾರ್ಯಾಚರಿಸುತ್ತಿರುವ ಬೇಳ ಗ್ರಾಮಾಧಿಕಾರಿಗಳ ಕಾರ್ಯಾಲಯದಲ್ಲಿ ಗ್ರಾಮಾಧಿಕಾರಿ, ಇಬ್ಬರು ಸಹಾಯಕ ಗ್ರಾಮಾಧಿಕಾರಿಗಳು, ಒಬ್ಬ ಶುಚೀಕರಣ ನೌಕರ ಸಹಿತ ನಾಲ್ಕು ಮಂದಿ ನೌಕರರಿದ್ದಾರೆ. ಈ ಪೈಕಿ ಬುಧವಾರ ಗ್ರಾಮಾಧಿಕಾರಿ ತಾಲೂಕು ಕಚೇರಿಗೆ ತೆರಳಿದ್ದಾರೆ. ಇಬ್ಬರು ಸಹಾಯಕ ಗ್ರಾಮಾಧಿಕಾರಿಗಳ ಪೈಕಿ ಒಬ್ಬರು ರಜೆಯಾಗಿದ್ದಾರೆ. ಇನ್ನೊಬ್ಬ ತರಬೇತಿಗಾಗಿ ತೆರಳಿದ್ದಾರೆ. ಅದೇ ರೀತಿ ಶುಚೀಕರಣ ನೌಕರ ಕೂಡಾ ರಜೆಯಲ್ಲಿ ತೆರಳಿರುವುದರಿಂದ ಕಚೇರಿಗೆ ಯಾರೂ ಹೋಗಿಲ್ಲ. ಆದರೆ ಈ ಬಗ್ಗೆ ಯಾವುದೇ ಸೂಚನೆ ಇಲ್ಲದೆ ಬುಧವಾರ ಬೆಳಿಗ್ಗೆ ಹಲವು ಮಂದಿ ಗ್ರಾಮ ಕಚೇರಿಗೆ ತಲುಪಿದಾಗ ಮುಚ್ಚಿದ್ದುಕಂಡು ಬಂದಿದೆ. ಇದರಿಂದ ದೀರ್ಘ ಹೊತ್ತು ಕಾದು ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲ ಎಂದು ಬಗೆದು ಮರಳಬೇಕಾಯಿತು.