ಕುಂದಾಪುರ ತಾ ಪಂ ಸಭೆಯಲ್ಲಿ ಅಧಿಕಾರಿಗಳ ಗೈರಿನದ್ದೇ ಸದ್ದು

ಕುಂದಾಪುರ ತಾ ಪಂ ಸಭೆಯಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು

ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ತಾಲೂಕು ಪಂಚಾಯತ್ ಸಾಮಾನ್ಯ ಸಭೆಗೆ ಸತತ ಅಧಿಕಾರಿಗಳ ಗೈರನ್ನು ಪ್ರಶ್ನಿಸಬೇಕಾದ ತಾಲೂಕು ಪಂಚಾಯತ್ ಅಧ್ಯಕ್ಷರು ಮೌನಕ್ಕೆ ಶರಣಾಗಿ ಸದಸ್ಯರ ಆಕ್ರೋಶಕ್ಕೆ ಕಾರಣವಾದ ಘಟನೆ ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.

ತಾಲೂಕು ಪಂಚಾಯತ್ ನಿರ್ಣಯಗಳು ಕೇವಲ ಕಡತಕ್ಕಷ್ಟೆ ಸೀಮಿತವಾಗುತ್ತದೆ. ಅಧಿಕಾರಿಗಳು ಗಂಭೀರವಾಗಿ ಸ್ವೀಕರಿಸುತ್ತಿಲ್ಲ, ಮುಖ್ಯವಾಗಿ ಅವಶ್ಯಕವಿರುವ ಅಧಿಕಾರಿಗಳು ಕೂಡಾ ತಾ ಪಂ ಸಭೆಗೆ ಬರುತ್ತಿಲ್ಲ ಎನ್ನುವ ವಿಚಾರ ಸಭೆಯ ಪ್ರಾರಂಭದಲ್ಲಿ ಸದಸ್ಯರನ್ನು ಕೆರಳಿಸಿತು. ಪಶುಪಾಲನೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ವನ್ಯಜೀವಿ, ಇಂಜಿನಿಯರಿಂಗ್ ಪಿ ಆರ್ ಡಿ, ಅಬಕಾರಿ, ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ಈ ಬಗ್ಗೆ ಅಧ್ಯಕ್ಷರು ಮೌನ ವಹಿಸಿದ್ದು, ಸದಸ್ಯರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

“ಕುಂದಾಪುರ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅಧಿಕಾರಿಗಳು ಕೂಡಾ ಜನಪ್ರತಿನಿಧಿಗಳಿಗೆ ಗೌರವ ಕೊಡದ ಸ್ಥಿತಿ ನಿರ್ಮಾಣವಾಗಿದೆ.  ಮಧ್ಯವರ್ತಿಗಳ ಮೇಲಾಟ ಎಷ್ಟಾಗಿದೆ ಎಂದರೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವಷ್ಟು ಪ್ರಭಾವವನ್ನು ಹೊಂದಿದ್ದಾರೆ” ಎಂದು ಗೋಪಾಡಿ ಗ್ರಾ ಪಂ ಅಧ್ಯಕ್ಷೆ ಸರಸ್ವತಿ ಪುತ್ರನ್ ಹೇಳಿದರು. ಇದಕ್ಕೆ ತಾ ಪಂ ಸದಸ್ಯ ಕರುಣ್ ಪೂಜಾರಿ ಧ್ವನಿಗೂಡಿಸಿ, “ದಲ್ಲಾಳಿಗಳ ಮೂಲಕ ಹೋದರೆ ಕೆಲಸ ಬೇಗ ಆಗುತ್ತದೆ ಎನ್ನುವ ಅಭಿಪ್ರಾಯ ಇವತ್ತು ಜನರಲ್ಲಿ ಮೂಡಿದೆ. ಈ ಬಗ್ಗೆ ತಹಶೀಲ್ದಾರರು ಗಮನ ಹರಿಸಬೇಕು” ಎಂದು ಆಗ್ರಹಿಸಿದರು.

ಉಮೇಶ ಶೆಟ್ಟಿ ಕಲ್ಗದ್ದೆ ಮಾತನಾಡಿ, “ಕೆ ಎಸ್ ಆರ್ ಟಿ ಸಿ ಅದಾಲತ್ ಮಾಡುವಾಗ ತಾ ಪಂ ಸದಸ್ಯರಿಗೆ ಮಾಹಿತಿ ನೀಡಬೇಕು. ಇದರಲ್ಲಿ ಪಾಲ್ಗೊಂಡಾಗ ಸಮಸ್ಯೆ ಪರಿಹಾರಕ್ಕೆ ಸಾಧ್ಯವಿದೆ. ವಿಭಾಗೀಯ ಅಧಿಕಾರಿಗಳು ಇಲ್ಲಿ ಭಾಗವಹಿಸುವುದರಿಂದ ಸಮಸ್ಯೆ ಪರಿಹಾರ ಆಗುತ್ತದೆ” ಎಂದಾಗ ಪುಷ್ಪರಾಜ ಶೆಟ್ಟಿ ವಿರೋಧ ವ್ಯಕ್ತಪಡಿಸಿದರು.

“ಅದಾಲತಿನಲ್ಲಿಯೇ ತೀರ್ಮಾನ ಆಗುವುದಾದರೆ ತಾ ಪಂ ಸಾಮಾನ್ಯ ಸಭೆ ಏಕೆ, ತಾ ಪಂ.ನಲ್ಲಿ ಆದಾಲತ್ ನಡೆಯಲಿ” ಎಂದರು. ಇದಕ್ಕೆ ಕೆರಳಿದ ಉಮೇಶ ಶೆಟ್ಟಿ, “ತಾ ಪಂ ಸಭೆಗೆ ವಿಭಾಗೀಯ ಮಟ್ಟದ ಅಧಿಕಾರಿಗಳನ್ನು ಕರೆಸಲು ನಿಮ್ಮಿಂದ ಸಾಧ್ಯವೇ” ಎಂದು ಸವಾಲು ಹಾಕಿದರು.

“ಬೈಂದೂರು ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ಸುಗಳು ಹೋಗುತ್ತಿಲ್ಲ. ಬಸ್ ನಿಲ್ದಾಣದ ಹತ್ತಿರವೇ ಸರ್ಕಾರಿ ಕಚೇರಿಗಳು ಇರುವುದರಿಂದ ಬಸ್ಸಿನಲ್ಲಿ ಬಂದ ಜನರು ರಿಕ್ಷಾವನ್ನು ಅವಲಂಬಿಸಬೇಕಾಗುತ್ತದೆ. ಕೂಡಲೆ ಕುಂದಾಪುರ ಭಾಗದಿಂದ ಹೋಗುವ ಬಸ್ಸುಗಳು ಬೈಂದೂರು ಹೊಸ ಬಸ್ ನಿಲ್ದಾಣಕ್ಕೆ ಹೋಗುವಂತೆ ಸೂಚನೆ ನೀಡಬೇಕು” ಎಂದು ಶ್ಯಾಮಲ ಕುಂದರ್ ಒತ್ತಾಯಿಸಿದರು.


 

ಸಭೆಯಲ್ಲಿ ನಿದ್ದೆಗೆ ಜಾರಿದ ಅಧಿಕಾರಿ !

ತಾಲೂಕು ಪಂಚಾಯತ್ ಸಭೆ ನಡೆಯುತ್ತಿದ್ದರೆ ಜಿಲ್ಲಾ ಪಂಚಾಯತ್ ರಸ್ತೆಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ನಿದ್ದೆಗೆ ಜಾರಿದ್ದರು. ಪತ್ರಕರ್ತರ ಸಾಲಿನಲ್ಲಿ ಬಂದು ಕುಳಿತುಕೊಂಡ ಈ ಅಧಿಕಾರಿ ಗಂಭೀರ ಚರ್ಚೆ ನಡೆಯುತ್ತಿದ್ದರೂ ಕೂಡಾ ಈ ಜನ ನಿದ್ದೆಯಲ್ಲಿದ್ದರು. ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳ ಆಸಕ್ತಿ ಇಷ್ಟೇನಾ ಎನ್ನುವುದು ಇವರತ್ತ ಕೈ ತೋರಿಸುವಂತಾಗಿದ್ದು ವಿಪರ್ಯಾಸ.