ದೇರಳಕಟ್ಟೆ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಕೊರತೆಯಿಂದ ಪಾಠ ಸರಿ ನಡೆಯುತ್ತಿಲ್ಲ

ದೇರಳಕಟ್ಟೆ ಶಾಲೆಯಲ್ಲಿ 130ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ನಾವು ಬಡ ಕುಟುಂಬದವರು. ನಮ್ಮ ಶಾಲೆಯಲ್ಲಿ ಕನ್ನಡ ಮತ್ತು ಇತಿಹಾಸ ಶಿಕ್ಷಕರಿಲ್ಲ. ಸರಿಯಾಗಿ ಪಾಠಗಳು ನಡೆಯುತ್ತಿಲ್ಲ. ಮುಖ್ಯಾಪಾಧ್ಯಾಯರಿಗೆ “ಕನ್ನಡ ಮತ್ತು ಇತಿಹಾಸ ಶಿಕ್ಷಕರನ್ನು ತೆಗೆದುಕೊಳ್ಳಬೇಕು ಎಂದು ಕೇಳಿದರೆ, ಸರಕಾರ ನಮಗೆ ಹಣ ನೀಡುತ್ತಿಲ್ಲ. ಆದ್ದರಿಂದ ತೆಗೆದುಕೊಳ್ಳುತ್ತಿಲ್ಲ” ಎಂದು ಗದರಿಸಿ ಓಡಿಸುತ್ತಾರೆ.

ನಂತರ ಕನ್ನಡವನ್ನು ಅವರೇ ತೆಗೆದುಕೊಳ್ಳಲು ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಲಿಲ್ಲ. ಇತರ ಶಿಕ್ಷಕರಿಗೆ ಕನ್ನಡ ಬೋಧಿಸಲು ವಹಿಸಿದರೂ ಅದು ಸಮರ್ಪಕವಾಗಿ ಆಗುತ್ತಿಲ್ಲ.

ಅವರು ಇತಿಹಾಸ ವಿಷಯವನ್ನು ಕನ್ನಡದಲ್ಲಿ ಕಲಿಸುತ್ತಾರೆ. ನಮ್ಮದು ಆಂಗ್ಲ ಮಾಧ್ಯಮ. ಕನ್ನಡದಲ್ಲಿ ಇತಿಹಾಸ ಕಲಿಸಿದರೆ ನಾವು ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಬೇಕೋ ? ಅಲ್ಲ ಇಂಗ್ಲೀಷಿನಲ್ಲಿಯೋ ? ಈಗ ಮತ್ತೆ ವಿಜ್ಞಾನ ವಿಷಯವನ್ನು ಅವರೇ ಬೋಧಿಸುತ್ತಿದ್ದು ಅದನ್ನು ಸಹ ಕನ್ನಡದಲ್ಲಿ ಕಲಿಸುತ್ತಿದ್ದಾರೆ. ಅವರು ಕಷ್ಟಪಟ್ಟು ಪಾಠ ಮಾಡುವುದನ್ನು ನೋಡಿದರೆ ನಮಗೆ ನಗು ಬರುತ್ತದೆ. ನಕ್ಕರೆ ಕೆಟ್ಟದಾಗಿ ಬಯ್ಯುತ್ತಾರೆ. ನಮ್ಮ ವಿಜ್ಞಾನ ಶಿಕ್ಷಕಿಯರು ಮುಖ್ಯಾಧ್ಯಾಪಕರ ಕಿರಿಕಿರಿಯಿಂದ ವರ್ಗ ಮಾಡಿಕೊಂಡು ಹೋಗಿರುವುದಕ್ಕೆ ಇವರೇ ಕಾರಣರಾಗಿರುತ್ತಾರೆ.

ಶಾಲೆಯಲ್ಲಿ ಎಲ್ಲಾ ಶಿಕ್ಷಕಿ ಶಿಕ್ಷಕಿಯರನ್ನು ಗದರಿಸಿ ಬೆದರಿಸಿ ಹಿಂಸಿಸುತ್ತಾರೆ. ಇದರಿಂದಾಗಿ ಎಲ್ಲರೂ ಈ ಶಾಲೆಯಿಂದ ಬೇರೆ ಕಡೆ ಹೋಗಲು ಬಯಸುತ್ತಿದ್ದಾರೆ. ಈಗ ಪರೀಕ್ಷೆ ಸಮೀಪಿಸುತ್ತಿರುವುದರಿಂದ ನಮಗೆ ಬೇರೆ ಶಾಲೆಗೆ ಹೋಗಲು ಆಗುತ್ತಿಲ್ಲ. ನಮ್ಮ ಶಾಲೆಯಲ್ಲಿ ಸಜೇಶನ್ ಬಾಕ್ಸಿನಲ್ಲಿ ಎಷ್ಟು ಬಾರಿ ಬರೆದು ನಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೂ ಅದನ್ನು ಮುಖ್ಯಾಧ್ಯಾಪಕರು ಬೇರೆ ಯಾರಿಗೂ ತೋರಿಸುತ್ತಿಲ್ಲ. ಸಮಸ್ಯೆಯನ್ನು ಪರಿಹರಿಸುತ್ತಿಲ್ಲ.

ನೇರವಾಗಿ ನಾವೇ ಹೇಳಿದರೆ ಸಮಸ್ಯೆಯನ್ನು ಬಗೆಹರಿಸುವುದರ ಬದಲಾಗಿ ನಾವು ವಿದ್ಯಾರ್ಥಿನಿಯರು ಎಂಬ ಪರಿವೇ ಇಲ್ಲದೆ ಕಿರುಚಾಡುತ್ತಾರೆ. ಈ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮತ್ತು ಶಿಕ್ಷಕರ ಜೀವನ ನಾಯಿಪಾಡಾಗಿದೆ.

ನಮ್ಮ ಮುಖ್ಯೋಪಾಧ್ಯಾಪಕರು ಸುಮಾರು ಎರಡು ತಿಂಗಳು ತರಬೇತಿಗೆ ಹೋಗಿದ್ದ ಸಂದರ್ಭ ಶಾಲೆಯಲ್ಲಿ ಪಾಠ ಚೆನ್ನಾಗಿ ನಡೆಯುತ್ತಿತ್ತು. ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಿದ್ದರು, ಮಕ್ಕಳನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ನಮ್ಮನ್ನು ರಾತ್ರಿ ಕೂಡಾ ಓದಿಸುತ್ತಿದ್ದರು. ಈಗ ಯಾವ ಶಿಕ್ಷಕರೂ ನಮ್ಮ ಓದಿನ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕಾಟಚಾರಕ್ಕೆ ಪಾಠÀ ಮಾಡುತ್ತಿದ್ದಾರೆ. ಆದ್ದರಿಂದ ಇಲ್ಲಿನ ಮುಖ್ಯ ಅಧ್ಯಾಪಕರನ್ನು ಬೇರೆಡೆ ವರ್ಗಾಯಿಸಿ ಶಾಲೆಯಲ್ಲಿ ಓದುವ ವಾತಾವರಣ ನಿರ್ಮಿಸಿ ಕೊಡುವಂತೆ ಈ ಮೂಲಕ ಕೇಳಿ ಕೊಳ್ಳುತ್ತಿದ್ದೇವೆ. ಇಲ್ಲವಾದಲ್ಲಿ ಮುಂದಿನ ವರ್ಷ ಈ ಶಾಲೆಗೆ ವಿದ್ಯಾರ್ಥಿಗಳು ಖಂಡಿತಾ ಬರುವುದಿಲ್ಲ.

  • ಮನನೊಂದ ವಿದ್ಯಾರ್ಥಿನಿಯರು, ದೇರಳಕಟ್ಟೆ-ಮಂಗಳೂರು