ಮಿಥುನ್ ನಂತರ ಐವನ್ನಗೂ ಎಂಎಲ್ಲೆ ಟಿಕೆಟ್ ಭರವಸೆ ನೀಡಿದ್ರಂತೆ ಅಭಯ !

ಉದ್ಯಮಿ ಕುಲಾಸೊರಿಂದ ಗುಟ್ಟು ರಟ್ಟು 

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಮುಂಬರುವ ಎಂಎಲ್ಲೆ ಚುನಾವಣೆಯಲ್ಲಿ ಮೂಡುಬಿದಿರೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದಿದ್ದ ಶಾಸಕ ಅಭಯಚಂದ್ರ ತನ್ನ ಸ್ಥಾನಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ತರುವ ಪ್ರಯತ್ನದಲ್ಲಿದ್ದರೆ ಇತ್ತ ಇದೇ ಕ್ಷೇತ್ರದಿಂದ ಎಂಎಲ್ಲೆ ಟಿಕೆಟ್ ಗಿಟ್ಟಿಸಲು ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಕೂಡ ಭಾರೀ ಪ್ರಯತ್ನದಲ್ಲಿರುವುದು ಮತ್ತು ಇದಕ್ಕೆ ಹಾಲಿ ಎಂಎಲ್ಲೆ ಅಭಯಚಂದ್ರ ಸಾಥ್ ನೀಡಿರುವುದು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಹಿರಂಗವಾಗಿದೆ.

ಮೂಡುಬಿದಿರೆಗೆ ಕಾಂಗ್ರೆಸ್ ಎಂಎಲ್ಲೆ ಕ್ಯಾಂಡಿಡೇಟಾಗಿ ಮಿಥುನ್ ರೈಗೆ ಟಿಕೆಟ್ ಕೊಡಿಸುವುದಕ್ಕೆ ಅಭಯಚಂದ್ರ ಅಭಯಹಸ್ತ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅಭಯಚಂದ್ರ ಐವನ್ ಡಿಸೋಜಾಗೂ ಇದೇ ಕ್ಷೇತ್ರದಿಂದ ಎಂಎಲ್ಲೆ ಟಿಕೆಟ್ ಕೊಡಿಸುವುದಾಗಿ ಬೆಂಗಳೂರಿನ ಉದ್ಯಮಿ ರೊನಾಲ್ಡ್ ಕೊಲಾಸೊರಲ್ಲಿ ಭರವಸೆ ನೀಡಿದ್ದಾರೆನ್ನುವ ಕುತೂಹಲಕಾರಿ ವಿಷಯವನ್ನು ಸ್ವತಃ ಕುಲಾಸೊ ಶನಿವಾರ ಬಹಿರಂಗೊಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾರ ಮೂರು ವರ್ಷ ಆಡಳಿತ ಸಾಧನೆಯ ಪುಸ್ತಕ ಬಿಡುಗಡೆ ಸಮಾರಂಭ ಶನಿವಾರ ಅಲಂಗಾರಿನ ಹೋಲಿ ರೋಸರಿ ಅಶ್ರಮದಲ್ಲಿ ಶನಿವಾರ ನಡೆದಿತ್ತು. ಈ ವೇಳೆ ಮಾತನಾಡಿದ ಉದ್ಯಮಿ ಕುಲಾಸೊ, “ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದು ಶಾಸಕ ಅಭಯಚಂದ್ರ ನನ್ನಲ್ಲಿ ಹೇಳಿದಾಗ, ಹಾಗಾದರೆ ನಿಮ್ಮ ಸ್ಥಾನಕ್ಕೆ ಐವನ್ ಸೂಕ್ತ ವ್ಯಕ್ತಿ, ಸಪೋರ್ಟ್ ಮಾಡಬೇಕು ಎಂದಿದ್ದೆ. ಅದಕ್ಕೆ ಆಯಿತು ಎಂದು ಅಭಯಚಂದ್ರ ನನ್ನಲ್ಲಿ ಭರವಸೆ ನೀಡಿದ್ದರು. ಇದನ್ನು ಈ ಸಭೆಯಲ್ಲಿ ಅಭಯಚಂದ್ರರಿಂದಲೇ ಹೇಳಿಸಬೇಕೆಂದಿದ್ದೆ, ಅಭಯಚಂದ್ರರು ನನ್ನ ಸ್ನೇಹಿತ, ಆದರೆ ಅವರು ಸಭೆಗೆ ಬಾರದಿದ್ದದ್ದು ನನಗೆ ಬೇಸರ ತಂದಿದೆ” ಎಂದು ಹೇಳಿದರು.

ಇದಾದ ಸ್ವಲ್ಪ ಹೊತ್ತಿನಲ್ಲಿ ಅಭಯಚಂದ್ರ ಕಾರ್ಯಕ್ರಮಕ್ಕೆ ಬಂದು ಭಾಷಣ ಮಾಡಿದರೂ ಎಂಎಲ್ಲೆ ಟಿಕೆಟ್ ಬಗ್ಗೆ ಕೊಲಾಸೊ ಮಾತಿಗೆ ಏನೂ ಪ್ರತಿಕ್ರಿಯೆ ನೀಡದಿದ್ದರೂ ಸರಕಾರದ ಸಾಧನೆಯನ್ನು ಹೇಳಿ ಕೊನೆಗೆ ಕೊಲಸೊ ನನ್ನ ಆತ್ಮೀಯ ಮಿತ್ರರು ಎಂದು ಎರಡೆರಡು ಬಾರಿ ಪುನರುಚ್ಚರಿಸಿ ಮಾತು ಮುಗಿಸಿದರು.

ಮೂಡುಬಿದಿರೆ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಎಂಎಲ್ಲೆ ಸ್ಥಾನಕ್ಕೆ ಮಿಥುನ್ ರೈ ಜತೆಗೆ ಐವನ್ ಡಿಸೋಜಾ ಕೂಡ

ಆಕಾಂಕ್ಷಿ ಎಂಬುದು ಕುಲಾಸೊ ಮಾತಿನಿಂದ ಸ್ಪಷ್ಟವಾದಂತಾಗಿದೆ. ಐವನರ ಶನಿವಾರದ ಕಾರ್ಯಕ್ರಮದ ಪರೋಕ್ಷ ಸಂದೇಶ ಕೂಡ ಅದನ್ನೆ ಬಿಂಬಿಸುವಂತಿತ್ತು. ಮಿಥುನ್ ರೈ ಸಭೆಗೆ ಗೈರಾಗಿದ್ದರು.