ಗೋ ಹತ್ಯೆ ನಿಷೇಧಕ್ಕಾಗಿ `ಅಭಯಾಕ್ಷರ ಅಭಿಯಾನ’

ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ : “ರಾಜ್ಯದ ಪ್ರತಿ ವ್ಯಕ್ತಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಅರ್ಜಿ ಬರೆದು ಗೋ ಹತ್ಯೆ ನಿಷೇಧಿಸುವಂತೆ ಆಗ್ರಹಿಸಲು `ಅಭಯಾಕ್ಷರ ಅಭಿಯಾನ’ ಆರಂಭಿಸಲಾಗುತ್ತಿದೆ” ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು.

ಅವರು ಮಂಗಳವಾರ ಸಂಜೆ ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗೋ ದೀಕ್ಷಾ ಸಮಾರಂಭ ಉದ್ಘಾಟಿಸಿ, ಆಶೀರ್ವಚನ ನೀಡುತ್ತಿದ್ದರು.  “ಕೋಟ್ಯಂತರ ಜನರು ಗೋ ಹತ್ಯೆ ನಿಷೇಧಿಸುವಂತೆ ಅರ್ಜಿ ಬರೆದು ಅಭಿಯಾನದಲ್ಲಿ ಪಾಲ್ಗೊಂಡರೆ ಸರ್ಕಾರಗಳು ಅನಿವಾರ್ಯವಾಗಿ ಆ ಕಾರ್ಯ ಮಾಡಬೇಕಾಗುತ್ತದೆ. ಗೋ ಭಕ್ತಿಯ ಶಕ್ತಿಯನ್ನು ಲಿಖಿತ ರೂಪದಲ್ಲಿ ಸರ್ಕಾರಕ್ಕೆ ಮುಟ್ಟಿಸುವ ಅಭಿಯಾನವನ್ನು ಎಲ್ಲರೂ ಯಶಸ್ವಿಗೊಳಿಸಬೇಕು” ಎಂದರು.