ಪಡುಬಿದ್ರಿ ರಸ್ತೆಯಲ್ಲಿ ಅಪರಿಚಿತ ಕಾರು ಪತ್ತೆ

ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿ ಬಿಟ್ಟುಹೋದ ಅಪರಿಚಿತ ಕಾರು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಳೆದ ಆರು ದಿನಗಳ ಹಿಂದೆ ಪಡುಬಿದ್ರಿಯ ಕಾರ್ಕಳ ರಸ್ತೆ ಉಜ್ವಲ್ ಬ್ಯಾನರ್ ಪ್ರಿಂಟರ್ ಅಂಗಡಿಯ ಮುಂಭಾಗ ಯಾರೋ ನಿಲ್ಲಿಸಿ ಹೋಗಿದ್ದ ಕಾರು ಇಂದಿಗೂ ಅನಾಥವಾಗಿದ್ದು, ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂಡಿಕಾ ಕಂಪನಿಯ ಬೆಂಗಳೂರು ನೋಂದಣೆ ಸಂಖ್ಯೆ ಹೊಂದಿರುವ ಸಿಲ್ವರ್ ಬಣ್ಣದ ಕಾರು ಇದಾಗಿದೆ. ಕಾರ್ಕಳಕ್ಕೆ ಹೋಗುವ ರಸ್ತೆಯಂಚಿನಲ್ಲೇ ಈ ಕಾರನ್ನು ಬಿಟ್ಟು ಹೋಗಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನ ಬಾಗಿಲನ್ನು ತೆರೆದು ಅದನ್ನು ಪರಿಶೀಲಿಸಿದ್ದು, ಅದರಲ್ಲಿ ಪತ್ತೆಯಾದ ಮೊಬೈಲ್ ಸಂಖ್ಯೆಗೆ ಕರೆ ಮಾಡಲಾಯಿತಾದರೂ ಕರೆ ಸ್ವೀಕರಿಸದ ಕಾರಣ ಪೊಲೀಸರು ಅನಿರ್ವಾಯ ಸ್ಥಿತಿಯಲ್ಲಿ ಕಾರನ್ನು ಠಾಣೆಗೆ ಸಾಗಿಸಿದ್ದಾರೆ.

ಆರು ದಿನಗಳ ಹಿಂದೆ ಬಿಟ್ಟುಹೋದ ಕಾರು, ಮೊಬೈಲಿಗೆ ಕರೆ ಮಾಡಿದರೂ ಸ್ವೀಕಾರವಾಗದ ಕರೆ, ಇದನ್ನೆಲ್ಲಾ ಗಮನಿಸುವಾಗ ಕಳವು ನಡೆಸಿದ ಕಾರು ಇದಾಗಿರಬಹುದೇ ಇಲ್ಲ ಯಾವುದೋ ಕೃತ್ಯಕ್ಕೆ ಬಳಸಿ ಇಲ್ಲಿ ಬಿಟ್ಟು ಹೋಗಿರಬಹುದೇ ಎಂಬ ಸಂಶಯ ಸಾರ್ವಜನಿಕರನ್ನು ಕಾಡುತ್ತಿದ್ದು, ಈ ಬಗ್ಗೆ ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಸತ್ಯೆಗಳು ತಿಳಿದುಬರಲಿದೆ.