ದೌರ್ಜನ್ಯಕ್ಕೊಳಗಾದ ಮಹಿಳೆಯರ ಆಸರೆ `ವಿಶೇಷ ಚಿಕಿತ್ಸಾ ಘಟಕ’

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೈಹಿಕ ಮತ್ತು ಲೈಂಗಿಕ ಸೇರಿದಂತೆ ವಿವಿಧ ರೀತಿ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರಿಗೆ ಸರ್ವರೀತಿಯಲ್ಲೂ ನೆರವು ನೀಡಲು ಮಂಗಳೂರಿನ ಲೇಡಿಗೋಷನ್ ಸರಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ಚಿಕಿತ್ಸಾ ಘಟಕವು ನೊಂದ ಮಹಿಳೆಯರ ಪಾಲಿಗೆ ಆಸರೆಯಾಗಿ ಪರಿಣಮಿಸಿದೆ.

ಸಂತ್ರಸ್ತರು ಚಿಕಿತ್ಸೆಗಾಗಿ, ಪೆÇಲೀಸ್ ನೆರವಿಗಾಗಿ, ಕಾನೂನಿನ ನೆರವಿಗಾಗಿ, ಆಪ್ತ ಸಮಾಲೊಚನೆಗಾಗಿ, ಪುನರ್ವಸತಿ ಸೌಲಭ್ಯಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗಲು ತೊಂದರೆ ಮತ್ತು ಮುಜುಗರ ಅನುಭವಿಸುವುದು ಸಾಮಾನ್ಯ. ಇದನ್ನು ತಪ್ಪಿಸುವ ಸಲುವಾಗಿ ಸರಕಾರ ಎಲ್ಲಾ ಜಿಲ್ಲೆಗಳಲ್ಲಿಯೂ ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕವನ್ನು ಸ್ಥಾಪಿಸಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕವನ್ನು 2014ರ ನವೆಂಬರ್ 1ರಂದು ಸ್ಥಾಪಿಸಲಾಗಿತ್ತು.

ಇಲ್ಲಿ ಎಲ್ಲಾ ಸೇವೆಗಳು ಉಚಿತವಾಗಿ ನುರಿತ ತಜ್ಞರಿಂದ ದೊರೆಯುತ್ತದೆ. ಯಾವುದೇ ಬೇಧವಿಲ್ಲದೇ ಎಲ್ಲರಿಗೂ ಸೇವೆ ಲಭ್ಯ. ವೈದ್ಯಕೀಯ ನೆರವನ್ನು ನೀಡಿ, ಆಸ್ಪತ್ರೆಯ ಸರಹದ್ದಿನ ಪೆÇಲೀಸ್ ಠಾಣೆಯವರಿಗೆ ಸೂಚನಾಪತ್ರದ ಮೂಲಕ ಮಾಹಿತಿಯನ್ನು ನೀಡಲಾಗುತ್ತದೆ. ಈ ಮೂಲಕ ಪೆÇಲೀಸ್ ಇಲಾಖೆಯವರು ನೊಂದ ಮಹಿಳೆಗೆ ನ್ಯಾಯ ಒದಗಿಸುವುದರಲ್ಲಿ ಕಾರ್ಯನಿರತರಾಗುತ್ತಾರೆ. ಆಪ್ತ ಸಮಾಲೊಚಕರು ಸಮಾಲೋಚನೆ ನೀಡುವ ಮೂಲಕ ಮಾನಸಿಕ ಧೈರ್ಯವನ್ನು ಹೆಚ್ಚಿಸುತ್ತಾರೆ. ಪುನರ್ವಸತಿ ಅಗತ್ಯವಿದ್ದಲ್ಲಿ ಆಕೆಗೆ ಉಚಿತವಾಗಿ ನೀಡಲಾಗುತ್ತದೆ. ಕಾನೂನು ಸಮಾಲೋಚಕರು ಕಾನೂನಿನ ಬಗ್ಗೆ ಅರಿವು ಮೂಡಿಸಿ ಕಾನೂನಿನ ನೆರವನ್ನು ಉಚಿತವಾಗಿ ನೀಡುತ್ತಾರೆ.

ಘಟಕದಲ್ಲಿ ಒಬ್ಬ ಆಪ್ತ ಸಮಾಲೋಚಕರು, ಒಬ್ಬ ಮಹಿಳಾ ಪೆÇಲೀಸ್ ಅಧಿಕಾರಿ, ಇಬ್ಬರು ಕಾನೂನು ಸಮಾಲೋಚಕರು ಮತ್ತು ಮೂವರು ಸಮಾಜ ಸೇವಕರು ಕಾರ್ಯ ನಿರ್ವಹಿಸುತ್ತಾರೆ. ಈ ಘಟಕವು ವಾರದ 7 ದಿನಗಳಲ್ಲಿಯೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಈ ಮಹಿಳಾ ಘಟಕದ ಉಚಿತ ದೂರವಾಣಿ ಸಹಾಯವಾಣಿ ಸಂಖ್ಯೆ 181ಕ್ಕೆ ಕರೆ ಮಾಡಿ ಯಾವುದೇ ನೊಂದ ಮಹಿಳೆಯರು ಮಾಹಿತಿ ನೀಡಬಹುದು. ಇಲ್ಲಿಯವರೆಗೂ 330 ಪ್ರಕರಣಗಳು ಈ ಘಟಕದಲ್ಲಿ ದಾಖಲಾಗಿದೆ. ಸಂತ್ರಸ್ತರಿಗೆ 25,000 ರೂ ಮೊತ್ತವನ್ನು ತುರ್ತು ಆರ್ಥಿಕ ಪರಿಹಾರ ಮೊತ್ತವಾಗಿ ನೀಡಲಾಗುತ್ತಿದೆ.