ತಮ್ಮ ಆಯ್ಕೆಯ ಒಬ್ಬೊಬ್ಬ ಅಭ್ಯರ್ಥಿ ಪರ ಕ್ರೈಸ್ತ ಧರ್ಮಗುರುಗಳ ಪ್ರಚಾರ ಅಪಾಯಕಾರಿ : ಆಪ್

ಪಣಜಿ : ಮುಂಬರುವ ರಾಜ್ಯ ಚುನಾವಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರುಗಳು ತಮ್ಮ ಆಯ್ಕೆಯ ಅಭ್ಯರ್ಥಿಯೊಬ್ಬರ ಪರವಾಗಿ ಬಹಿರಂಗ ಪ್ರಚಾರ ನಡೆಸುವುದು “ಅಪಾಯಕಾರಿ ಪ್ರವೃತ್ತಿ”ಯಾಗಬಹುದು ಎಂದು ಆಮ್ ಆದ್ಮಿ ಪಕ್ಷ (ಎಎಪಿ), ಆರ್ಚಬಿಷಪ್ ಫಿಲಿಪ್ ನೇರಿ ಫೆರಾರೋಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

“ಒಬ್ಬೊಬ್ಬ ಧರ್ಮಗುರು ಒಬ್ಬೊಬ್ಬ ಅಭ್ಯರ್ಥಿಯ ಪರ ಪ್ರಚಾರ ನಡೆಸುವುದರಿಂದ ಪರಸ್ಪರ ಧರ್ಮಗುರುಗಳ ಮಧ್ಯೆ ಬಿರುಕು ಉಂಟಾಗಲಿದೆ. ಇಂತಹ ಅಪಾಯಕಾರಿ ಪ್ರವೃತ್ತಿಯಿಂದ ಚರ್ಚುಗಳು ತಮ್ಮ ನೀತಿ-ನಿರೂಪಣೆಯ ಬೆಲೆ ಕಳೆದುಕೊಳ್ಳಬಹುದು” ಎಂದು ಎಎಪಿ ತನ್ನ ಪತ್ರದಲ್ಲಿ ಎಚ್ಚರಿಸಿದೆ.

“ಚರ್ಚ್ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಧರ್ಮಗುರುಗಳು ವೈಯಕ್ತಿಕ ನೆಲೆಯಲ್ಲಿ ಅರಾಜಕತೆಗೆ ಕಾರಣರಾಗಲಿದ್ದಾರೆ. ಇವರಿಂದ ಭ್ರಷ್ಟ ರಾಜಕಾರಣಿಗಳಿಗೆ ಉತ್ತೇಜನ ಸಿಗಲಿದ್ದು, ಧರ್ಮಗುರುಗಳಿಗೂ ಕಳಂಕ ತಟ್ಟಲಿದೆ” ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಹಿಂದೆ ಇಂತಹ ಕೆಲವರು ಯಾವುದೇ ಪಕ್ಷ ಅಥವಾ ಸಿದ್ಧಾಂತದ ಬದಲಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದುಂಟು. ಇವರು ಒಂದು ಚುನಾವಣೆ ಮುಗಿದ ಬಳಿಕ ನಾಪತ್ತೆಯಾಗಿ, ಮತ್ತೊಂದು ಚುನಾವಣೆ ಹೊತ್ತಿಗೆ ಮರಳಿ ಕಾಣಿಸಿಕೊಳ್ಳುತ್ತಾರೆ ಎಂದು ಎಎಪಿ ಹೇಳಿದೆ.