ಟ್ರ್ಯಾಕ್ಟರಿಂದ ವಿಮಾನ ವಿಳಂಬ ಎನ್ನುವುದು ಸತ್ಯಕ್ಕೆ ದೂರ ಪ್ರಾಧಿಕಾರ ನಿರ್ದೇಶಕ ಸ್ಪಷ್ಟನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಮಾನ ನಿಲ್ದಾಣದ ರನ್ ವೇಯಲ್ಲಿ ಟ್ರ್ಯಾಕ್ಟರ್ ನಿಂತ ಪರಿಣಾಮ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ, ವಿಮಾನ ವಿಳಂಬವಾಗಿದೆ ಎನ್ನುವ ಸುದ್ದಿಗಳೆಲ್ಲವೂ ಸಂಪೂರ್ಣ ಸುಳ್ಳು ಎಂದು ಹೇಳಿರುವ ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ವಿ ವಿ ರಾವ್, ಅಲ್ಲಿ ಯಾವುದೇ ಟ್ರ್ಯಾಕ್ಟರ್ ನಿಂತಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂದಲೆಳೆಯ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿ ಹೋಗಿದೆ ಎನ್ನುವ ಸುದ್ದಿಯನ್ನು ಬಹುತೇಕ ಎಲ್ಲಾ ರಾಷ್ಟ್ರೀಯ ವಾಹಿನಿಗಳೂ ವರದಿ ಮಾಡಿದ್ದು, ದಿಗಿಲು ಹುಟ್ಟಿಸಿತ್ತು.

ರನ್ ವೇ ಸಮೀಪವೇ ಟ್ರ್ಯಾಕ್ಟರೊಂದು ನಿಂತಿತ್ತು. ಇದೇ ಸಂದರ್ಭ ಮುಂಬೈಯತ್ತ ಸಾಗಬೇಕಾಗಿದ್ದ ವಿಮಾನವೊಂದು ಟೇಕಾಫ್ ಆಗುತ್ತಿತ್ತು. ಇದು ಏರ್ ಟ್ರಾಫಿಕ್ ಕಂಟ್ರೋಲರ್ ಗಮನಕ್ಕೆ ಬಂದಿತ್ತು, ಎಟಿಎಸ್ ಸಿಬ್ಬಂದಿ ಕೂಡಲೇ ವಿಮಾನದ ಪೈಲಟಿಗೆ ಸಂದೇಶ ರವಾನಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ ಎಂದು ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದವು.

ಆದರೆ ಇದು ಸುಳ್ಳೆಂದು ಹೇಳಿರುವ ನಿರ್ದೇಶಕರು, “ವಿಮಾನ ಟೇಕಾಫ್ ಆಗುವ ವೇಳೆ ರನ್ ವೇಯಲ್ಲಿ ಟ್ರ್ಯಾಕ್ಟರ್ ಆಗಲಿ, ವಸ್ತುವಾಗಲಿ ಇರಲೇ ಇಲ್ಲ. ವಿಮಾನ ಟೇಕ್ ಆಫ್ ಆಗುವ ಮುನ್ನವೇ ರನ್ ವೇಗಿಂತ ತುಂಬಾ ದೂರದಲ್ಲಿ ಟ್ರ್ಯಾಕ್ಟರ್ ಇದ್ದಿರುವುದನ್ನು ಏರ್ ಟ್ರಾಫಿಕ್ ಕಂಟ್ರೋಲರ್ ಗಮನಕ್ಕೆ ಬಂದಿತ್ತು, ಕೂಡಲೇ ಟ್ರ್ಯಾಕ್ಟರ್ ತೆಗೆಯಿಸಿದ ಬಳಿಕ ವಿಮಾನ ಸುರಕ್ಷಿತವಾಗಿ ಟೇಕಾಫ್ ಆಗಿದೆ” ಎಂದಿದ್ದಾರೆ.

 

LEAVE A REPLY