ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯ : ಸುಪ್ರೀಂ ಆದೇಶದ ಉಲ್ಲಂಘನೆ ?

 ನವದೆಹಲಿ : ಸರ್ಕಾರಿ ಇಲಾಖೆಗಳು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪ್ರಜೆಗಳ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮತ್ತು ಯುಐಡಿ ಸಂಖ್ಯೆಯನ್ನು ಬೆಸೆಯಲು ಒತ್ತಾಯಿಸುತ್ತಿರುವುದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಮಂಗಳೂರು ಮೂಲದ ನಿವೃತ್ತ ಮೇಜರ್ ಜನರಲ್ ಎಸ್ ಜಿ ಒಂಬತ್ಕೆರೆ ಆರೋಪಿಸಿದ್ದಾರೆ.

ಈ ಕುರಿತು ಕೇಂದ್ರ ಹಣಕಾಸು ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಒಂಬತ್ಕೆರೆ ಇದರ ಪ್ರತಿಯನ್ನು ಆರ್ಬಿಐ ಗವರ್ನರ್ ಅವರಿಗೂ ರವಾನಿಸಿದ್ದಾರೆ.

2015ರ ಅಕ್ಟೋಬರ್ 15ರಂದು ಸುಪ್ರೀಂಕೋರ್ಟ್ ಐವರು ಸದಸ್ಯರ ಪೀಠ ನೀಡಿದ್ದ ಆದೇಶದ ಅನ್ವಯ ಗ್ಯಾಸ್ ಸಬ್ಸಿಡಿ, ಉದ್ಯೋಗ ಖಾತ್ರಿಯೋಜನೆ, ವಿಧವಾವೇತನ, ವೃದ್ಧಾಪ್ಯ ವೇತನ ಮತ್ತು ವಿಕಲಾಂಗ ವೇತನ ಮತ್ತು ಪ್ರಧಾನ ಮಂತ್ರಿಗಳ ಜನಧನ್ ಯೋಜನೆಯನ್ನು ಹೊರತುಪಡಿಸಿ ಮತ್ತಾವುದೇ ಯೋಜನೆಗೆ ಆಧಾರ್ ಕಡ್ಡಾಯವಾಗಿರುವುದಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ 2013 ಸೆಪ್ಟಂಬರ್ 23ರಂದು ನೀಡಿದ ಆದೇಶವನ್ನು ಪಾಲಿಸುವಂತೆ ಒಂಬತ್ಕರೆ ಆಗ್ರಹಿಸಿದ್ದಾರೆ.

“ಆಧಾರ್ ಕಾರ್ಡ್ ಕಡ್ಡಾಯ ಮಾಡುವಂತಿಲ್ಲ ಹಾಗಾಗಿ ಆಧಾರ್ ವಿತರಣೆಗೂ ಮುನ್ನ ಜನಸಾಮಾನ್ಯರಿಗೆ ಇದರ ಫಲಾಫಲಗಳ ಮನದಟ್ಟು ಮಾಡಿಯೇ ನೀಡಲಾಗುತ್ತದೆ, ಸರ್ಕಾರದ ಸಾಮಾಜಿಕ ಯೋಜನೆಗಳನ್ನು ಹೊರತುಪಡಿಸಿದರೆ ಮತ್ತಾವುದೇ ಯೋಜನೆಗೆ ಆರ್ಧಾರ್ ಕಡ್ಡಾಯ ಮಾಡುವುದಿಲ್ಲ ಎಂದು ಭಾರತದ ಅಟೋರ್ನಿ ಜನರಲ್ ಸುಪ್ರೀಂಕೋರ್ಟಿಗೆ ಆಶ್ವಾಸನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಹಣಕಾಸು ವ್ಯವಹಾರಗಳನ್ನು ನಡೆಸಲು ಆಧಾರ್ ಕಡ್ಡಾಯ ಮಾಡುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ” ಎಂದು ಮೇಜರ್ ಜನರಲ್ ಒಂಬತ್ಕೆರೆ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.