ಆಧಾರ್ ಕಾರ್ಡ್ ಮತ್ತು ಅವಕಾಶವಂಚಿತರು

ಪಡಿತರ ವ್ಯವಸ್ಥೆಯಲ್ಲಿ ಆಧಾರ್ ಬಳಕೆಯಿಂದ ಭ್ರಷ್ಟಾಚಾರ ಪರಾಕಾಷ್ಠೆ ತಲುಪಿದೆ.

  • ರೀತಿಕಾ ಖೇರಾ

2009ರಲ್ಲಿ ಆಧಾರ್ ಯೋಜನೆಯನ್ನು ಜಾರಿಗೊಳಿಸಿದಾಗ ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಎಡಿಐ) ಭ್ರಷ್ಟಾಚಾರ ನಿಗ್ರಹ ಮತ್ತು ಜನಪರ ಯೋಜನೆಗಳ ಪ್ರಾಮಾಣಿಕ ಅನುಷ್ಟಾನಕ್ಕೆ ಪೂರಕವಾಗುತ್ತದೆ ಎಂದು ಹೇಳಿತ್ತು. `ಆಧಾರ’ದಿಂದ ಒಳಿತಾಗುತ್ತದೆ ಎಂದು ಹೇಳಿದ್ದವರೂ ಸಹ ಇಂದು ಮೌನಕ್ಕೆ ಶರಣಾಗಿದ್ದಾರೆ.

2010ರಲ್ಲೇ ಯುಐಎಡಿಐ ದಾಖಲೆಗಳನ್ನು ಪರಿಶೀಲಿಸಿದ ತಜ್ಞರು ಸರ್ಕಾರದ ಈ ದಕ್ಷತೆಯ ಪ್ರಮಾಣಪತ್ರದಲ್ಲಿ ಹುರುಳಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಮುಖ್ಯವಾಗಿ ಇಲ್ಲಿ ವಂಚನೆ ಇದ್ದುದು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ. ತಲಾ 25 ಕಿಲೋ ಅಕ್ಕಿ ನೀಡುವ ಬದಲು ರೇಷನ್ ಅಂಗಡಿಯವರು ಕಡಿಮೆ ಪ್ರಮಾಣ ನೀಡುತ್ತಿದ್ದರು. ಜನರೂ ಮೌನವಾಗಿ ಸಹಿಸಿಕೊಳ್ಳುತ್ತಿದ್ದರು. ಈಗ ಆಧಾರ್ ಆಧರಿತ ಬಯೋಮೆಟ್ರಿಕ್ ವ್ಯವಸ್ಥೆ ಇದ್ದರೂ ಈ ವಂಚನೆ ನಡೆಯುತ್ತಲೇ ಇದೆ. ಏಕೆಂದರೆ ಈ ವಂಚನೆ ನಡೆಯುವುದು ಪದಾರ್ಥಗಳ ಪ್ರಮಾಣದಲ್ಲೇ ಹೊರತು ವಿತರಣೆಯ ಮಾರ್ಗದಲ್ಲಿ ಅಲ್ಲ. ತಿಂಗಳ ಕೊನೆಗೆ ರೇಷನ್ ಅಂಗಡಿಯಲ್ಲಿ ತಮ್ಮ ಪಾಲಿನ ದವಸಧಾನ್ಯಗಳನ್ನು ಕೆಲವರು ಪಡೆಯದೆ ಇದ್ದರೆ ಅದನ್ನು ಅಂಗಡಿಯವನು ಮಾರುಕಟ್ಟೆ ಬೆಲೆಯಲ್ಲಿ ಮಾರಿಕೊಳ್ಳುವುದು ಸಾಮಾನ್ಯ ಸಂಗತಿ. ಈ ವಂಚನೆಯ ಜಾಲವನ್ನು ನಿಯಂತ್ರಿಸಲು ಕೆಲವು ರಾಜ್ಯಗಳಲ್ಲಿ ರೇಷನ್ ಕೊಳ್ಳಲು ಮೂರು ತಿಂಗಳ ಕಾಲಾವಧಿಯನ್ನೂ ನೀಡಲಾಗಿದೆ.

ಹೆಬ್ಬೆರಳು ಗುರುತನ್ನು ಆಧರಿಸಿ ಪಡಿತರ ವಿತರಿಸುವ ವ್ಯವಸ್ಥೆಯಲ್ಲಿ ದಿನಗೂಲಿ ಮಾಡಿ ಕೈಗಳು ಸವೆದಿರುವವರು ವೃದ್ಧರು ಮತ್ತಿತರರಿಗೆ ಸಮಸ್ಯೆ ಉಂಟಾಗುತ್ತದೆ ಎಂಬ ಎಚ್ಚರಿಕೆಯನ್ನು ಆರಂಭದಲ್ಲೇ ನೀಡಲಾಗಿತ್ತು. ಆದರೆ ಈ ಎಚ್ಚರಿಕೆಯನ್ನು ಲೆಕ್ಕಿಸದೆ ಯುಪಿಎ ಮತ್ತು ಎನ್ ಡಿ ಎ ಸರ್ಕಾರಗಳು ಪಿಂಚಣಿ ವಿತರಿಸುವಲ್ಲೂ ಇದೇ ಮಾದರಿ ಅನುಸರಿಸಿವೆ.

ವೃದ್ಧಾಪ್ಯ ಪಿಂಚಣಿದಾರರಿಗೆ ಹೆಬ್ಬೆಟ್ಟಿನ ಗುರುತು ತಾಳೆಯಾಗುವುದೇ ವಿರಳ. ಕೆಲವೊಮ್ಮೆ ವೃದ್ಧರಿಗೆ ವಿಭಿನ್ನ ಆಧಾರ್ ಕೇಂದ್ರಗಳಲ್ಲಿ ತಮ್ಮ ಮಾಹಿತಿ ದಾಖಲಿಸುವಂತೆ ಕೋರಲಾಗುತ್ತದೆ. ತಾವು ಪಡೆಯುವ 200 ರಿಂದ 1400 ರೂಗಳ ಅಲ್ಪ ಪಿಂಚಣಿಗಾಗಿ ವೃದ್ಧರು ಆಧಾರ್ ಕಾರ್ಡ್‍ಗಾಗಿ, ಖಾತೆ ತೆರೆಯುವ ಸಲುವಾಗಿ, ಬ್ಯಾಂಕುಗಳಿಗೆ ಆಧಾರ್ ಕಾರ್ಡ್ ಸಲ್ಲಿಸುವ ಸಲುವಾಗಿ ಬಯೋಮೆಟ್ರಿಕ್ ಮಾಹಿತಿ ದಾಖಲಿಸಲು ಹಲವಾರು ಬಾರಿ ಅಲೆದಾಡುವುದು ಅನಿವಾರ್ಯವಾಗುತ್ತದೆ.

ಹಲವಾರು ಸಂದರ್ಭಗಳಲ್ಲಿ ವೃದ್ಧರು ಈ ಪರಿಪಾಟಲು ತಾಳಲಾರದೆ ತಮ್ಮ ಪಿಂಚಣಿಯನ್ನೇ ಕೈಬಿಡುತ್ತಾರೆ. ಆಧಾರ್ ಕಾರ್ಡ್ ವತಿಯಿಂದ ರಾಜಸ್ಥಾನದ ಗ್ರಾಮಗಳಲ್ಲಿ ಮಹಿಳೆಯರು ತಮ್ಮ ಪಿಂಚಣಿ ಪಡೆಯಲು ಕಡ್ಡಾಯವಾಗಿ ಬ್ಯಾಂಕುಗಳಿಗೆ ಹೋಗಬೇಕಿದೆ.

ದೇಶದ ಹಲವಾರು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ವಿಧವೆಯರು ಮತ್ತು ಇತರ ಒಂಟಿ ಮಹಿಳೆಯರು ಪಿಂಚಣಿ ಪಡೆಯಲು ತಮ್ಮ ಕುಟುಂಬ ಸದಸ್ಯರನ್ನು ಅವಲಂಬಿಸುತ್ತಾರೆ. ಇಲ್ಲವಾದಲ್ಲಿ ತಮಗೆ ಪಿಂಚಣಿ ಪಡೆಯಲು ನೆರವಾಗುವವರಿಗೆ ಅಲ್ಪ ಹಣ ನೀಡುತ್ತಾರೆ. ವೃದ್ಧಾಪ್ಯದಲ್ಲಿ ಸ್ವಂತ ಜೀವನಾಧಾರಕ್ಕಾಗಿ ನೀಡುವ ಪಿಂಚಣಿಯನ್ನು ಪಡೆಯಲು ವೃದ್ಧರು ಪರಾವಲಂಬಿಗಳಾಗಬೇಕಿರುವುದು ಆಧಾರ್ ವ್ಯವಸ್ಥೆಯ ಕೊಡುಗೆ.

ಮತ್ತೊಂದೆಡೆ ಪಡಿತರ ವ್ಯವಸ್ಥೆಯಲ್ಲಿ ಆಧಾರ್ ಬಳಕೆಯಿಂದ ಭ್ರಷ್ಟಾಚಾರ ಪರಾಕಾಷ್ಠೆ ತಲುಪಿದೆ. ಝಾರ್ಖಂಡದ ರಾಂಚಿಯಲ್ಲಿ ಆಗಸ್ಟ್ ತಿಂಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಿದಾಗ  ಕೇವಲ ಶೇ 53ರಷ್ಟು ಧಾನ್ಯಗಳನ್ನು ವಿತರಿಸಲು ಸಾಧ್ಯವಾಗಿತ್ತು. ಅಂತರ್ಜಾಲ ಸಂಪರ್ಕದ ಕೊರತೆ, ಸರ್ವರ್ ಸಮಸ್ಯೆ, ಬಯೋಮೆಟ್ರಿಕ್ ಅವ್ಯವಸ್ಥೆ ಮೂಲ ಕಾರಣವಾಗಿದ್ದವು. ಈ ನಡುವೆ ಪರಿಸ್ಥಿತಿ ಸುಧಾರಣೆಯಾಗಿದ್ದರೂ ಸಂಪೂರ್ಣ ಯಶಸ್ಸು ಸಾಧಿಸಲಾಗಿಲ್ಲ. ರಾಜಸ್ಥಾನದಲ್ಲೂ ಸಹ ಈ ಪದ್ಧತಿಯ ಯಶಸ್ಸು ಶೇ 70ರಷ್ಟಿದೆ. ಶೇ 30ರಷ್ಟು ಜನರು ತಮ್ಮ ಪಡಿತರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಹಲವಾರು ಪಡಿತರ ದುಖಾನುಗಳಲ್ಲಿ ಹಳೆಯ ಪದ್ಧತಿಯನ್ನೇ ಅನುಸರಿಸಲಾಗುತ್ತಿದೆ.

ಬಯೋಮೆಟ್ರಿಕ್ಕಿನಲ್ಲಿ ಉಂಟಾಗುವ ಸಮಸ್ಯೆಗಳನ್ನು ಪಡಿತರ ಅಂಗಡಿಗಳವರು ಗ್ರಾಹಕರಿಗೆ ತಿಳಿಸುವುದೇ ಇಲ್ಲ. ಇದರಿಂದ ಭ್ರಷ್ಟಾಚಾರ ಮತ್ತೊಮ್ಮೆ ತಲೆದೋರಿದೆ. ಅಂಗಡಿಯ ಮಾಲೀಕರು ಪಡಿತರ ವಿತರಣೆ ಮಾಡುತ್ತಾರೆಯೋ ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವರೋ ಎಂದು ತಿಳಿಯುವ ಸಾಧ್ಯತೆಗಳೂ ಕಡಿಮೆ.

ಆಧಾರ್ ಆಧಾರಿತ ಬಯೋಮೆಟ್ರಿಕ್ ಸಮಸ್ಯೆಗಳನ್ನು ನೀಗಿಸುವ ಒಂದು ವಿಧಾನ ಇದೆಯೇ ಎಂಬ ಅನುಮಾನ ಮೂಡುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸುವ ಬದಲು ಸರ್ಕಾರಗಳು ಮೌನಕ್ಕೆ ಶರಣಾಗಿವೆ. ನಕಲಿ ಪಡಿತರ ಚೀಟಿಗಳ ದಾಖಲೆಯೂ ಸಹ ಸರಿಯಾಗಿ ಇಲ್ಲ. ಹಲವಾರು ರಾಜ್ಯಗಳಲ್ಲಿ ಪಡಿತರ ಪದ್ಧತಿಯಿಂದ ಕೈಬಿಡಲಾದ ಕುಟುಂಬಗಳ ಮಾಹಿತಿ ನೀಡಿದರೆ ಇನ್ನು ಕೆಲವು ರಾಜ್ಯಗಳು ವ್ಯಕ್ತಿಗಳ ಹೆಸರು ನೀಡುತ್ತವೆ. ಈ ವ್ಯಕ್ತಿಗಳ ಸಂಖ್ಯೆಯನ್ನೇ ಕುಟುಂಬಗಳೆಂದು ಕೆಲವು ರಾಜ್ಯಗಳು ವರದಿ ಮಾಡಿವೆ.

ಪಡಿತರ ವಿತರಣೆಯಲ್ಲಿನ ಬಯೋಮೆಟ್ರಿಕ್ ಪದ್ಧತಿ ಮತ್ತು ಪಿಂಚಣಿ ವಿತರಣೆಯಲ್ಲಿನ ಸಮಸ್ಯೆಗಳಿಂದ ಅಸಂಖ್ಯಾತ ಜನರು ಅವಕಾಶವಂಚಿತರಾಗಿರುವುದು ಸ್ಪಷ್ಟ. ಭ್ರಷ್ಟಾಚಾರವೂ ಸಹ ವ್ಯಾಪಕವಾಗುತ್ತಿದೆ. ಆರೋಗ್ಯ, ಶಿಕ್ಷಣ, ಸ್ಕಾಲರ್‍ಷಿಪ್ ಕ್ಷೇತ್ರದಲ್ಲೂ ಆಧಾರ್ ಆಧರಿತ ಪದ್ಧತಿ ಜಾರಿಯಲ್ಲಿರುವುದರಿಂದ ತಂತ್ರಜ್ಞಾನ ಆಧಾರಿತ ಭ್ರಷ್ಟಾಚಾರ ಇನ್ನೂ ಹೆಚ್ಚಾಗುತ್ತಿರುವುದು ಸ್ಪಷ್ಟ.