ಸರಕಾರಿ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು, ಆಧಾರ್ ಸಂಖ್ಯೆ ಹಾಗೂ ಅಂಚೆ/ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಾದ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಗಳಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಯು ಆಧಾರ್ ಸಂಖ್ಯೆ, ಬ್ಯಾಂಕ್, ಅಂಚೆ ಖಾತೆ ವಿವರ ಮತ್ತು ಒಪ್ಪಿಗೆಯನ್ನು 2017ನೇ ಮಾರ್ಚ್ ಅಂತ್ಯದೊಳಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಆಧಾರ್ ಸಂಖ್ಯೆ ಸಂಗ್ರಹಣೆಗಾಗಿ ಸಂಬಂಧಿಸಿದ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಿಂಚಣಿ ಮಂಜೂರಾತಿ ಆದೇಶ ಸಂಖ್ಯೆ/ ಪಿಪಿಒಐಡಿ ಜೊತೆಗೆ ಆಧಾರ್ ಸಂಖ್ಯೆ, ಅಂಚೆ/ಬ್ಯಾಂಕ್ ಖಾತೆಸಂಖ್ಯೆ ಮತ್ತು ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಕೊಡಬೇಕು. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರ ಮುಖಾಂತರ (ಹೋಬಳಿ ಮಟ್ಟದಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರಗಳು) ಹಾಗೂ ತಾಲೂಕು ಕೇಂದ್ರ/ನಗರ ಪ್ರದೇಶಗಳಲ್ಲಿ ತಾಲೂಕು ಕಚೇರಿಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ನೀಡಬೇಕು. ಆಧಾರ್ ಸಂಖ್ಯೆ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿದವರು ಆಧಾರ್ ಸಂಖ್ಯೆ ದೊರೆತಿಲ್ಲವಾದ್ದಲ್ಲಿ, 28 ಅಂಕಿಯ ಇಐಡಿ ಸಂಖ್ಯೆಯನ್ನು ನೀಡಬಹುದಾಗಿದೆ. ಇಐಡಿ ಸಂಖ್ಯೆಗೆ ಯಶಸ್ವಿಯಾಗಿ ಆಧಾರ್ ಸಂಖ್ಯೆ ಲಭ್ಯವಾದಲ್ಲಿ ಇಲಾಖೆ ವತಿಯಿಂದಲೇ ಅದನ್ನು ಸೇರಿಸಲಾಗುವುದು.

ಈ ಬಗ್ಗೆ ದೂರುಗಳು ಇದ್ದಲ್ಲಿ ಸಂಬಂಧಿಸಿದ ಅಟಲ್ ಜೀ ಜನಸ್ನೇಹಿ ಕೇಂದ್ರ/ತಾಲೂಕು ಕಚೇರಿ/ಜಿಲ್ಲಾಧಿಕಾರಿ ಕಚೇರಿ ಮತ್ತು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ದ ಕ ಜಿಲ್ಲಾಡಳಿತ ತಿಳಿಸಿದೆ.