ಮಂಗಳಮುಖಿಯರಿಗೆ ಆಧಾರ್ ನೋಂದಣಿ ಕೇಂದ್ರ

ಆಧಾರ್ (ಸಾಂದರ್ಭಿಕ ಚಿತ್ರ)

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಕೇಂದ್ರ ಸರಕಾರವು ತನ್ನೆಲ್ಲಾ ಯೋಜನೆಗಳಿಗೂ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುತ್ತಿರುವಂತೆಯೇ ಇದೀಗ ಪರಿವರ್ತನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ನೋಂದಣಿಯನ್ನು ಟ್ರಸ್ಟ್ ಕಚೇರಿಯಲ್ಲಿ ನಡೆಸಲಾಗುತ್ತಿದೆ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ಜಿ ಜಗದೀಶ್ ನಿರ್ದೇಶನದನ್ವಯ ಇದನ್ನು ಪ್ರಾರಂಭಿಸಲಾಗಿದ್ದು  ಸೋಮವಾರದವರೆಗೆ ವಿಸ್ತರಿಸಲಾಗಿದೆ  ಡಿ 17ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳಮುಖಿಯರ ಅಹವಾಲನ್ನು ಆಲಿಸಿದ ಜಿಲ್ಲಾಧಿಕಾರಿ ಆಧಾರ್ ಕಾರ್ಡ್  ಬ್ಯಾಂಕ್ ಖಾತೆ  ರೇಶನ್ ಕಾರ್ಡ್ ಮತ್ತು ನಿವೇಶನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೂ ಸೂಚನೆ ನೀಡಿದ್ದರು  ಅಲ್ಲದೆ ಯಾವುದೇ ತಕರಾರು ಮಾಡದೇ ಆಧಾರ್ ಕಾರ್ಡನ್ನು ವಿತರಿಸಲು ಕ್ರಮಕ್ಕೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಸೂಚನೆಯನ್ವಯ ಪರಿವರ್ತನ್ ಚಾರಿಟೇಬಲ್ ಟ್ರಸ್ಟ್ ವಿಶೇಷ ಆಸಕ್ತಿ ವಹಿಸಿ ಈ ನೋಂದಣಿಯನ್ನು ಪ್ರಾರಂಭಿಸಿದೆ
ಟ್ರಸ್ಟ್ ಕಚೇರಿಯಲ್ಲಿ ಶುಕ್ರವಾರ ಆಧಾರ್ ನೋಂದಣಿ ಪ್ರಾರಂಭಗೊಂಡಿತ್ತು  ಆಧಾರ್ ಕಾರ್ಡ್ ನೋಂದಣಿ ಕೇಂದ್ರದಲ್ಲಿ ಕೋಆರ್ಡಿನೇಟರ್ ನರೇಂದ್ರ ನಾಯಕ್ ಮತ್ತು ಶ್ವೇತಾ ಶರತ್ ಕಾರ್ಯನಿರ್ವಹಿಸಿದರು
ಇಂತಹದ್ದೊಂದು ಟ್ರಸ್ಟ್ ಪ್ರಾರಂಭಗೊಳ್ಳುವ ಮುನ್ನ ನಾವೆಲ್ಲರೂ ಬೇರೆ ಬೇರೆಯಾಗಿದ್ದೆವು  ಇದೀಗ ನಾವೆಲ್ಲರೂ ಒಗ್ಗಟ್ಟಾಗಿದ್ದು  ನಮ್ಮ ಸಮಸ್ಯೆಗಳ ಬಗ್ಗೆ ಹೋರಾಡುವಂತಾಗಿದೆ  ಸಮಾಜದೊಂದಿಗೆ ನಾವೂ ಉತ್ತಮವಾಗಿ ಸ್ಪಂದಿಸುವವರಿದ್ದೇವೆ  ಎನ್ನುತ್ತಾರೆ ಮಂಗಳಮುಖಿ ಸಂಜನಾ
ಎಲ್ಲರಂತೇ ನಾವೂ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಆಸೆ ಇದೆ  ನಾವೂ ವೃತ್ತಿ ಕೌಶಲ್ಯದೊಂದಿಗೆ ಸ್ವಾವಲಂಬಿಗಳಾಗುತ್ತೇವೆ ಎನ್ನುತ್ತಾರೆ ಮಂಗಳಮುಖಿಯರು