ಯಕ್ಷಗಾನ ಒಳನೋಟದ ಮೇಲೆ ಬೆಳಕು ಚೆಲ್ಲುವ ಮ್ಯೂಸಿಯಂ

ಮಂಜೇಶ್ವರ : ರಾಷ್ಟ್ರಕವಿ ಗೋವಿಂದ ಪೈ ಮನೆ ನವೀಕರಣಗೊಳ್ಳುತ್ತಿದ್ದು, ಈ ಮನೆಯಲ್ಲಿ ಒಂದು ಯಕ್ಷದೇಗುಲ ಎಂಬ ಯಕ್ಷಗಾನ ಮ್ಯೂಸಿಯಂ ಕೂಡ ತಲೆಎತ್ತುತ್ತಿದೆ. ಸುಮಾರು 5 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಪುನರ್ ನವೀಕರಣದಲ್ಲಿ ಸ್ವಲ್ಪ ಮೊತ್ತವನ್ನು ಯಕ್ಷಗಾನ ಮ್ಯೂಸಿಯಂಗೆ ವಿನಿಯೋಗಿಸಲಾಗಿದೆ.

ಅತಿ ಚಿಕ್ಕದಾದ ಸ್ಥಳದಲ್ಲಿ ಅಚ್ಚುಕಟ್ಟಾಗಿರುವ ಯಕ್ಷದೇಗುಲ ಮ್ಯೂಸಿಯಂನಲ್ಲಿ ಯಕ್ಷಗಾನದ ವಿವಿಧ ವೇಷಗಳನ್ನು ಸುಂದರವಾಗಿ ವ್ಯವಸ್ಥೆಗೊಳಿಸಲಾಗಿದೆ.

ಕವಿ ಗೋವಿಂದ ಪೈ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದರಿಂದ ಈ ಯಕ್ಷದೇಗುಲ ಮ್ಯೂಸಿಯಮನ್ನು ಅಸ್ಥಿತ್ವಕ್ಕೆ ತರಲಾಗಿದೆ. ಪುನರ್ ನವೀಕರಣಗೊಂಡ ಮನೆ ಮತ್ತು ಹೊಂದಿಕೊಂಡಿರುವ ಸಭಾಂಗಣ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ.

ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮ್ಯೂಸಿಯಂ ಒಂದನ್ನು ವಿನ್ಯಾಸಗೊಳಿಸಿರುವ ರಂಗಭೂಮಿ ಕಲಾವಿದ ಜೀವನರಾಮ್ ಸುಳ್ಯ ಈ ಮ್ಯೂಸಿಯಮನ್ನು ರಚಿಸಿದ್ದಾರೆ. ಈ  ಮ್ಯೂಸಿಯಮ್ ಪ್ರವೇಶಿಸುವ ಜನರನ್ನು ಯಕ್ಷಗಾನದ ಹಾಡುಗಳು ಸ್ವಾಗತಿಸಲಿವೆ.

ಪುಂಡು ವೇಷ, ಸ್ತ್ರೀವೇಷ, ರಾಜ ವೇಷ, ಭೀಮನ ಮುಡಿ ಮತ್ತು ಕಿರಾತಕ ಮೊದಲಾದ ಸುಮಾರು 10 ವೇಷಗಳ ಆಕೃತಿಗಳನ್ನು ರಚಿಸಲಾಗಿದೆ. ವಿವಿಧ ಸಾಂಪ್ರದಾಯಿಕ ಶೈಲಿಗಳನ್ನು ಪ್ರದರ್ಶಿಸುವ ಮಣ್ಣಿನಿಂದ ಮಾಡಿದ ಮುಖವಾಡಗಳನ್ನು ಜೋಡಿಸಲಾಗಿದೆ. ಮನೋಹರ್ ಎಸ್ ಕುಂದರ್ ಮತ್ತು ಮನೋಹರ್ ಉಪಾಧ್ಯಾಯ ತೆಗೆದಿರುವ ಹಿರಿಯ ಯಕ್ಷಗಾನ ಕಲಾವಿದರ ಭಾವಚಿತ್ರಗಳು, ಚೆಂಡೆ ಮದ್ದಲೆ ಮತ್ತು ತಾಳ ಮೊದಲಾದ ಯಕ್ಷಗಾನ ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

“ಸಣ್ಣ ಮಾದರಿಯ ಯಕ್ಷಗಾನ ವೇದಿಕೆಯನ್ನು ಕೂಡ ಕಾಣಬಹುದು, ಪ್ರತಿ ಕಲಾಪ್ರಕಾರದ ಕೆಳಗೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ವಿವರಣೆ ಇದೆ. ಯಕ್ಷಗಾನದ ಒಳನೋಟ ಮಾತ್ರವಲ್ಲದೆ ಕಲಾಪ್ರಕಾರದ ನೈಜ ಪ್ರದರ್ಶನವನ್ನು ಕೂಡ ಸವಿಯಬಹುದು” ಎಂದು ಜೀವನರಾಮ್ ಸುಳ್ಯ ಹೇಳಿದ್ದಾರೆ.