ಮಂಗಳೂರು ನಗರಕ್ಕೊಂದು ವಿವೇಕಾನಂದ ಉದ್ಯಾನವನ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ನಗರದಲ್ಲಿ ಎಲ್ಲೆಂದರಲ್ಲಿ ಕಾಂಕ್ರೀಟು ರಸ್ತೆ, ಕಟ್ಟಡಗಳು ತುಂಬಿ ಹೋಗಿರುವ ಈ ಕಾಲಘಟ್ಟದಲ್ಲಿ ಉದ್ಯಾನವನದ ಕೊರತೆ ಕಾಡುತ್ತಿದೆ. ಕದ್ರಿ ಉದ್ಯಾನವನ, ಗಾಂಧೀ ಪಾರ್ಕ್, ಠಾಗೋರ್ ಪಾರ್ಕ್ ಬಿಟ್ಟರೆ ಉತ್ತಮ, ಸುಂದರವಾದ ಉದ್ಯಾನವನ ಇಲ್ಲಿಲ್ಲ. ಇದೀಗ ಬಿಜೈ ವಾರ್ಡಿನ ಕಾರ್ಪೋರೇಟರ್ ಪ್ರಕಾಶ್ ವಿಶೇಷ ಆಸಕ್ತಿ ವಹಿಸಿಕೊಂಡು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಉದ್ಯಾನವನದ ಹೆಸರು `ವಿವೇಕಾನಂದ ಉದ್ಯಾನವನ’.
ಸ್ವಾಮಿ ವಿವೇಕಾನಂದರ 154ನೇ ಜನ್ಮದಿನೋತ್ಸವದ ಸಂದರ್ಭ ನಗರದ ಬಿಜೈ ಕರಂಗಲ್ಪಾಡಿ ರಸ್ತೆಯ ಬಿಜೈ ಚರ್ಚ್ ಬಳಿ ಜ.17ರಂದು ಈ ಉದ್ಯಾನವನ ಲೋಕಾರ್ಪಣೆಗೊಳ್ಳಲಿದೆ. ಸ್ವಾಮಿ ವಿವೇಕಾನಂದರ ಪುತ್ಥಳಿ, ಮಕ್ಕಳಿಗೆ ಆಟೋಟ ಸಾಧನ, ಕಲ್ಲು ಬೆಂಚುಗಳು, ಹಸಿರು ಪರಿಸರ ಇಲ್ಲಿ ಮೈದಳೆಯಲಿದೆ. ಉದ್ಯಾನವನದ ಆವರಣಗೋಡೆ ಪುತ್ಥಳಿಗೆ ಕಟ್ಟೆ ಮತ್ತಿತರ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಸುಮಾರು 5 ಸೆಂಟ್ಸ್ ಜಾಗದಲ್ಲಿ 5 ಲಕ್ಷ ರೂ.ವೆಚ್ಚದಲ್ಲಿ ಈ ಉದ್ಯಾನವನ ನಿರ್ಮಾಣಗೊಳ್ಳುತ್ತಿದೆ ಎನ್ನುತ್ತಾರೆ ಈ ಯೋಜನೆಯ ರೂವಾರಿ, ಸ್ಥಳೀಯ ಕಾರ್ಪೋರೇಟರ್ ಪ್ರಕಾಶ್ ಸಾಲಿಯಾನ್.
ಸಾಮಾಜಿಕ ಹೊಣೆಗಾರಿಕೆಯಡಿ ಭಂಡಾರಿ ಬಿಲ್ಡರ್ಸ್ ಈ ಉದ್ಯಾನವನದ ಪ್ರಾಯೋಜಕತ್ವವನ್ನೂ ವಹಿಸಿಕೊಂಡಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ 60 ವಾರ್ಡ್‍ಗಳಿವೆ. ಪ್ರತಿಯೊಬ್ಬ ಕಾರ್ಪೋರೇಟರ್ ತಮ್ಮ ವ್ಯಾಪ್ತಿಯಲ್ಲಿ ಒಂದೊಂದು ಉದ್ಯಾನವನ ನಿರ್ಮಿಸಲು ಆಸಕ್ತಿ ವಹಿಸಿದರೆ ಸ್ಮಾರ್ಟ್ ಸಿಟಿ ಜೊತೆಗೆ ಮಂಗಳೂರು ಗ್ರೀನ್ ಸಿಟಿಯೂ ಆದೀತು.