ಔಷಧೀಯ ಗುಣದ ಮಿಸ್ರಿ ಜೇನು ಕೃಷಿ ಬೆಳೆದು ಯಶ ಕಂಡ ಕೃಷಿಕ

ಪುತ್ತೂರು : ಇತ್ತೀಚಿನ ದಿನಗಳಲ್ಲಿ ಜೇನು ಆದಾಯ ತಂದು ಕೊಡುವ ಒಂದು ಕೃಷಿಯಾಗಿದೆ. ಆದರೆ ಹಳೇ ಕಾಲದ ಜೇನು ಕೃಷಿಯನ್ನು ಬಿಟ್ಟು ಇಲ್ಲೊಬ್ಬ ರೈತರು ವಿಭಿನ್ನ ಪ್ರಯತ್ನದ ಜೇನುಕೃಷಿಯನ್ನು ಮಾಡಿಕೊಂಡು ಕೈತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಇವರೇ ಪುತ್ತೂರಿನ ಪಾಣಾಜೆಯ ಬೈಂಕ್ರೋಡಿ ನಿವಾಸಿ ವೆಂಕಟಕೃಷ್ಣ ಭಟ್.

ಗೆರಟೆ, ಪುಟ್ಟ ಪುಟ್ಟ ಮರದ ಪೆಟ್ಟಿಗೆಗಳನ್ನು ತಯಾರಿಸಿ ಜೇನು ಕೃಷಿ ಮಾಡುತ್ತಿರುವ ಇವರು ಬೆಲೆ ಬಾಳುವ ಔಷಧೀಯ ಗುಣಮಟ್ಟದ ಮಿಸ್ರಿ ಜೇನುನೊಣಗಳನ್ನು ಗೆರಟೆಯಲ್ಲಿ ಬೆಳೆಯುತ್ತಿದ್ದಾರೆ. ಈ ಜೇನು ಹಳತಾದಂತೆ ಬೆಲೆಯು ದುಪ್ಪಟ್ಟಾಗುತ್ತದೆ. ಅಡಿಕೆ, ಬಾಳೆ, ತೆಂಗು ಕೃಷಿಯೊಂದಿಗೆ ಸಾಮಾನ್ಯವಾಗಿ ಉಪೇಕ್ಷೆಗೆ ಒಳಗಾಗಿರುವಂತಹ ಮಿಸ್ರಿ ಜೇನುಗಳ ಸಾಕಾಣಿಕೆ ಇವರ ಮುಖ್ಯ ಕಸುಬು.

ಗೋಡೆಗಳ ನಡುವೆ, ಬಿದಿರಿನ ಕೊಳವೆಯೊಳಗೆ ಹೀಗೆ ಎಲ್ಲೆಂದರಲ್ಲಿ ಗೂಡು ಮಾಡಿಕೊಂಡು ತನ್ನಷ್ಟಕ್ಕೆ ತಾನು ಜೇನು ಶೇಖರಿಸಿಡುತ್ತಿರುವ ಮಿಸ್ರಿ ಜೇನುಗಳನ್ನು ತಾವೇ ನಿರ್ಮಿಸಿದ ಗೂಡುಗಳಲ್ಲಿ ಸಾಕುತ್ತಿದ್ದಾರೆ ಭಟ್ಟರು. ಎಣ್ಣೆಯ ಅಂಶವಿರದ ತೆಂಗಿನ ಮೂರು ಗೆರಟೆಗಳನ್ನು ಜೋಡಿಸುವ ಮೂಲಕ ಜೇನುಗಳಿಗೆ ಜೇನು ಸಂಗ್ರಹಿಸಲು, ಪರಾಗ ಸಂಗ್ರಹಿಸಿಡಲು ಹಾಗೂ ತಮ್ಮ ಸಂತಾನಭಿವೃದ್ಧಿಗೆ ಬೇಕಾದಂತಹ ಅವಕಾಶವನ್ನು ಕಲ್ಪಿಸುವ ಮೂಲಕ ವಿನೂತನ ಮಾದರಿಯಲ್ಲಿ ಜೇನು ಸಂಗ್ರಹಿಸುತ್ತಿದ್ದಾರೆ.

ತುಳು ಭಾಷೆಯಲ್ಲಿ ಮೊಜಂಟಿ ಜೇನೆಂದೂ, ಮಲೆಯಾಳ ಭಾಷೆಯಲ್ಲಿ ಚೆರುತೇನೀಜ ಎಂದೂ ಹೇಳುತ್ತಾರೆ. ಪೆಟ್ಟಿಗೆ ಜೇನಿನಲ್ಲಿ ಸಿಗುವಷ್ಟು ಉತ್ಪಾದನೆ ಈ ಜೇನುಗಳಲ್ಲಿ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಇವುಗಳನ್ನು ಸಾಕಲು ಯಾರೂ ಮುಂದಾಗುತ್ತಿಲ್ಲ. ಆದರೆ ಇದು ಔಷಧೀಯ ಗುಣಗಳನ್ನು ಹೊಂದಿದೆ. ಈ ಜೇನು ನೊಣಗಳಿಂದ ಸಂಗ್ರಹಿಸಲ್ಪಡುವ ಜೇನು ಅಲ್ಪ ಪ್ರಮಾಣದ್ದಾಗಿದ್ದರೂ, ಮಾರುಕಟ್ಟೆಯಲ್ಲಿ ಈ ಜೇನಿಗೆ ಒಳ್ಳೆಯ ಬೆಲೆಯೂ ಇದೆ.  ಮಾರುಕಟ್ಟೆಯಲ್ಲಿ ಈ ಜೇನಿಗೆ ಕಿಲೋವೊಂದಕ್ಕೆ 2 ಸಾವಿರದಿಂದ 3 ಸಾವಿರದವರೆಗೂ ಬೆಲೆಯಿದೆ ಎನ್ನತ್ತಾರೆ ಭಟ್ಟರು.

ಇವರ ಬಳಿ ಸುಮಾರು 100ಕ್ಕೂ ಮಿಕ್ಕಿ ಮಿಸ್ರಿ ಜೇನುಗಳ ಕುಟುಂಬವಿದ್ದು, ತನ್ನ ತೋಟದ ಸುತ್ತಲೂ ಗೆರಟೆಗಳ ಮೂಲಕ, ಪೆಟ್ಟಿಗೆಗಳ ಮೂಲಕ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. ಮಿಸ್ರಿ ಜೇನುಗಳನ್ನು ಸಾಕುವವರಿಗೆ ಜೇನು ಕುಟುಂಬವನ್ನೂ ನೀಡುವಂತಹ ಕಾರ್ಯ ಮಾಡುತ್ತಿರುವ ಈ ಕೃಷಿಕ ಡಿಸೆಂಬರ್ ಮತ್ತು ಜನವರಿಯಲ್ಲಿ ಜೇನು ಸಂಗ್ರಹಿಸಲು ಸಾಧ್ಯವಿದ್ದು, ಜೇನು  ಕುಟುಂಬಗಳನ್ನು ಪಾಲು ಮಾಡುವುದು ಫೆಬ್ರವರಿ ಹಾಗೂ ಮಾರ್ಚ್ ತಿಂಗಳು ಸೂಕ್ತ ಎನ್ನುತ್ತಾರೆ.