ಒಂದು ನಕಲಿ ಮದುವೆ ಕೊಲೆಯ ಕಥೆಯಿದು

ನೊಯ್ಡಾ : ಇಬ್ಬರು ಮಕ್ಕಳ ತಂದೆಯೊಬ್ಬ ತನ್ನನ್ನು ವಿವಾಹವಾಗುವಂತೆ ಕಾಡುತ್ತಿದ್ದ ಪ್ರಿಯತಮೆಯನ್ನು ಕೊಲ್ಲಲು ಹೂಡಿದ ಉಪಾಯ ಹಾಗೂ ಅದನ್ನು ಕಾರ್ಯಗತಗೊಳಿಸಿದ ರೀತಿ ಯಾವ ಥ್ರಿಲ್ಲರ್ ಸಿನೆಮಾಗಿಂತ ಕಡಿಮೆಯಿಲ್ಲ. ಘಟನೆ ಗ್ರೇಟರ್ ನೊಯ್ಡಾದಿಂದ ವರದಿಯಾಗಿದ್ದು ಆ ವ್ಯಕ್ತಿಯ ಲಾಲಸೆಗೆ 22 ವರ್ಷದ ಅಮಾಯಕ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಕಥೆ ಆರಂಭವಾಗಿದ್ದು ಹೀಗೆ.
ಹೇಮಂತ್ ಕೌಶಿಕ್ (30) ಎಂಬಾತ ಗ್ರೇಟರ್ ನೊಯ್ಡಾದ ಆರೋಗ್ಯ ಕೇಂದ್ರವೊಂದರ ಉದ್ಯೋಗಿಯಾಗಿದ್ದ. ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರುವ ಹೊರತಾಗಿಯೂ ಆತ 22 ವರ್ಷದ ಮಾಧುರಿ ಎಂಬ ಯುವತಿಯನ್ನು ಪ್ರೇಮಿಸತೊಡಗಿದ್ದ. ಆದರೆ ದಿನ ಕಳೆದ ಹಾಗೆ ತನ್ನನ್ನು ಮದುವೆಯಾಗುವಂತೆ ಮಾಧುರಿ ಆತನನ್ನು ಕಾಡಲಾರಂಭಿಸಿದಾಗ ಆಕೆಯನ್ನು ತನ್ನ ದಾರಿಯಿಂದ ದೂರವಾಗಿಸಲು ಆತ ಕೊಲೆ ಸಂಚೊಂದನ್ನು ರೂಪಿಸಿಬಿಟ್ಟ.
ಮೊದಲಾಗಿ ಯಾರೂ ತನ್ನ ಮೇಲೆ ಸಂಶಯಗೊಳ್ಳದಂತೆ ಮಾಡಲು ಆತ ಮಾಧುರಿಯನ್ನು ಸಂಪರ್ಕಿಸಿ ಆಕೆಯ ಮಾಜಿ ಬಾಯ್ ಫ್ರೆಂಡ್ ರಾಹುಲ್ ಎಂಬವನ ಜತೆ ನಕಲಿ ವಿವಾಹ ಮಾಡಿಕೊಳ್ಳುವಂತೆ ಆಕೆಯ ಮನವೊಲಿಸಿದ. ಮಾಧುರಿಯನ್ನು ನಂತರ ತಾನು ಕೊಂದರೂ ಎಲ್ಲರೂ ರಾಹುಲ್ ಮೇಲೆ ಸಂಶಯಗೊಳ್ಳುವರು ಎಂಬ ನಂಬಿಕೆ ಆತನಿಗಿತ್ತು.
ಆತನ ಯೋಜನೆಯಂತೆಯೇ ಮಾಧುರಿ ಹಾಗೂ ರಾಹುಲ್ ವಿವಾಹ ಆರ್ಯ ಸಮಾಜ ದೇವಳದಲ್ಲಿ ನವೆಂಬರ್ 27ರಂದು ಜರುಗಿದ ಕೂಡಲೇ ಆತ ಆಕೆಯ ಕುಟುಂಬವನ್ನು ಸಂಪರ್ಕಿಸಿ ಆಕೆ ರಾಹುಲ್ ಜತೆ ಓಡಿಹೋಗಿದ್ದಾಳೆಂದು ದೂರಿದ್ದ. ಮಾಧುರಿ ರಾಜಪುತ್ ಸಮುದಾಯಕ್ಕೆ ಸೇರಿದವಳಾಗಿದ್ದರೆ, ರಾಹುಲ್ ಜಾಟ್ ಆಗಿದ್ದರಿಂದ ಸಹಜವಾಗಿ ಅವರ ವಿವಾಹಕ್ಕೆ ಅವರ ಸಮುದಾಯಗಳಿಂದ ತೀವ್ರ ವಿರೋಧ ಎದುರಾಗಿ ಸ್ಥಳೀಯ ಪಂಚಾಯತ್ ಅವರ ವಿವಾಹವನ್ನು ರದ್ದುಗೊಳಿಸಿತ್ತು.
ಡಿಸೆಂಬರ್ 23ರಂದು ಮಾಧುರಿಯನ್ನು ಸಂಪರ್ಕಿಸಿದ ಹೇಮಂತ್ ಕೌಶಿಕ್ ತನ್ನ ಜತೆ ಪರಾರಿಯಾಗುವಂತೆ ಹೇಳಿದಾಗ ಆಕೆ ಒಪ್ಪಿದ್ದಳು. ಅಂತೆಯೇ ಅವರಿಬ್ಬರು ಕಬ್ಬಿನ ತೋಟವೊಂದರಲ್ಲಿ ಅಡಗಿ ಕುಳಿತರು. ಜೀವನ ನಡೆಸಲು ಒಂದು ಉತ್ತಮ ಮನೆ ಹುಡುಕುವ ತನಕ ಅಡಗಿಯೇ ಇರಬೇಕೆಂದು ಹೇಳಿದ ಆತ ಅವಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ಆ ಗದ್ದೆಯಲ್ಲಿ ಥರಗುಟ್ಟುವ ಚಳಿಯ ನಡುವೆ ಮಾಧುರಿ ಮೂರು ದಿನಗಳನ್ನು ಕಳೆದಿದ್ದಳು. ನಂತರ ತಾಳ್ಮೆ ಕಳೆದುಕೊಂಡ ಆಕೆ ಆತನನ್ನು ಪ್ರಶ್ನಿಸಲು ಆರಂಭಿಸಿದ್ದೇ ತಡ ಆತ ಆಕೆಯ ದುಪಟ್ಟಾದಿಂದಲೇ ಆಕೆಯನ್ನು ಉಸಿರುಗಟ್ಟಿಸಿ ಡಿಸೆಂಬರ್ 26ರಂದು ಕೊಲೆ ಮಾಡಿ ನಂತರ ದೇಹವನ್ನು ಹೂತುಬಿಟ್ಟ.
ಮಾಧುರಿಯ ಹೆತ್ತವರು ರಾಹುಲ್ ಮೇಲೆ ಸಂಶಯ ವ್ಯಕ್ತಪಡಿಸಿ ಆತ ಬಂಧನಕ್ಕೊಳಗಾಗುತ್ತಾನೆಂಬುದು ಹೇಮಂತ್ ಕೌಶಿಕ್ ಯೋಚನೆಯಾಗಿತ್ತು. ಆದರೆ ಪೊಲೀಸರು ಸ್ಥಳೀಯ ಮೊಬೈಲ್ ಫೋನ್ ದಾಖಲೆಗಳನ್ನು ಪರಿಶೀಲಿಸಿದಾಗ ಹೇಮಂತ್ ಕೌಶಿಕ್ ಬೇರೆಯವರ ಹೆಸರಿನಲ್ಲಿ ಖರೀದಿಸಿದ್ದ ಮೊಬೈಲ್ ಸಿಮ್ ಉಪಯೋಗಿಸಿ ಹಲವು ಕರೆಗಳು ಹೋಗಿದ್ದವೆಂದು ತಿಳಿದು ಬಂದಿತ್ತು. ಅಂತಿಮವಾಗಿ ಹೇಮಂತ್ ಕೌಶಿಕ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿಚಾರಣೆಯ ವೇಳೆ ತನ್ನೆಲ್ಲಾ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಅಪಹರಣ ಮತ್ತು ಕೊಲೆ ಆರೋಪಗಳು ಈಗ ಆತನ ಮೇಲಿವೆ.