ಕಾರ್ಕಳದಲ್ಲೊಂದು ವಾಸನೆ ನಗರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯ ಬಂಡೀಮಠ ಜಂಕ್ಷನ್ನಿನಲ್ಲಿ ಹೊಸದಾಗಿ `ವಾಸನೆ ನಗರ’ ಅಸ್ತಿತ್ವಕ್ಕೆ ಬಂದಿದೆ. ಇದೇನು ವಾಸನೆ ನಗರ ಅಂತ ಹುಬ್ಬೇರಿಸಬೇಡಿ, ಇದು ಪುರಸಭೆಯ ನಿರ್ವಹಣೆಯಿಲ್ಲದೇ ಮ್ಯಾನಹೋಲ್ ಸೋರಿಕೆಯಿಂದಾಗಿ ಬೇಸತ್ತು ಸ್ಥಳೀಯ ನಿವಾಸಿಗಳು ಈ ಮ್ಯಾನಹೋಲ್ ಪಕ್ಕವೇ `ವಾಸನೆ ನಗರ’ ಎಂದು ಬೋರ್ಡ್ ಹಾಕಿದ್ದು ಪುರಸಭೆಯ ಮರ್ಯಾದೆ ಮೂರಾಬಟ್ಟೆಯಾಗಿದೆ.

ಬಂಡೀಮಠದ ಅಂಬೇಡ್ಕರ್ ಪ್ರತಿಮೆಯ ಬಳಿಯಿರುವ ಮ್ಯಾನಹೋಲಿನಲ್ಲಿ ಕೊಳಚೆನೀರು ಸೋರಿಕೆಯಾಗಿ ದುರ್ನಾತ ಬೀರುತ್ತಿದ್ದು ಪುರಸಭೆಗೆ ದೂರು ನೀಡಿದ್ದರೂ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ಸ್ಥಳೀಯರು ಪುರಸಭೆ ಆಡಳಿತಕ್ಕೆ ಬಿಸಿ ಮುಟ್ಟಿಸಲು `ವಾಸನೆ ನಗರ’ವೆಂಬ ಬೋರ್ಡ್ ಹಾಕಿದ್ದಾರೆ.

ಈ ಹಿಂದೆಯೂ ಕಾರ್ಕಳ ಪಟ್ಟಣದ ಕೆಲವು ಮ್ಯಾನಹೋಲಗಳು ಸೋರಿಕೆಯಾಗಿದ್ದರೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ತಕ್ಷಣವೇ ಸಕ್ಕಿಂಗ್ ಯಂತ್ರದ ಮೂಲಕ ದುರಸ್ತಿ ಮಾಡುತ್ತಿದ್ದರು. ಆದರೆ ಇದೀಗ ಪುರಸಭೆಗೆ ಸ್ವಚ್ಚತೆ ಕಾಳಜಿ ಕಡಿಮೆಯಾಗಿದೆ. ಸೋಮವಾರ ಮುಂಜಾನೆಯಿಂದಲೇ ಈ ಮ್ಯಾನಹೋಲ್ ಸೋರಿಕೆಯಾಗಿ ಇಡೀ ಪ್ರದೇಶವೇ ದುರ್ನಾತ ಬೀರುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಕಡೆ ಸುಳಿಯದ ಹಿನ್ನಲೆಯಲ್ಲಿ ಸಾರ್ವಜನಿಕರು  ಬೋರ್ಡ್ ಹಾಕಿ ಸರಕಾರಿ ಆಡಳಿತದ ಕಾರ್ಯವೈಖರಿಗೆ ಕನ್ನಡಿ ಹಿಡಿದಿದ್ದಾರೆ.

ಈ ಮ್ಯಾನಹೋಲ್ ಪಕ್ಕದ ಬೃಹತ್ ಅಪಾರ್ಟ್‍ಮೆಂಟಿನಿಂದ ಭಾರೀ ಪ್ರಮಾಣದ ಕೊಳಚೆನೀರು ಹರಿಯುವ ಹಿನ್ನಲೆಯಲ್ಲಿ ಮ್ಯಾನಹೋಲ್ ಸೋರಿಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.