ಕಲಾವಿದರ ಗಮನ ಸೆಳೆದ ವಿಶೇಷ ಕೊಡುಗೆ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಪ್ರತಿಯೊಬ್ಬರಿಗೂ ಏನಾದರೊಂದು ವಿಶೇಷ ಕೊಡುಗೆಗಳ ಮೂಲಕ ಗುರುತಿಸಿಕೊಳ್ಳಬೇಕೆಂಬ ಆಸೆ ಸಹಜವಾಗಿರುತ್ತದೆ. ಮುಖ್ಯವಾಗಿ ತಮ್ಮ ವಿವಾಹ, ಗೃಹ ಪ್ರವೇಶ, ಮುಂಜಿ ಮೊದಲಾದ ಸಮಾರಂಭದಲ್ಲಿ ಸ್ವಂತಿಕೆಯ ಛಾಪಿನೊಂದಿಗೆ ಅತಿಥಿಗಳನ್ನು ಮೆಚ್ಚಿಸಬೇಕೆಂಬ ಆಸೆ ಹೊಸತಲ್ಲ.
ಆಮಂತ್ರಣ ಪತ್ರಿಕೆ, ಊಟೋಪಚಾರ ಮೊದಲಾದವುಗಳಲ್ಲಿ ಹೊಸತನವನ್ನು ತಮ್ಮದೇ ದೃಷ್ಟಿಕೋನದಲ್ಲಿ ನಿರೂಪಿಸುವ ಪ್ರಯತ್ನಗಳು ಈಗೀಗ ಅಧಿಕಗೊಳ್ಳುತ್ತಿದೆ. ಆದರೆ ಇಲ್ಲೊಬ್ಬರು ತಮ್ಮ ಪುತ್ರನ ಉಪನಯನ ಸಮಾರಂಭದಲ್ಲಿ ನೀರ್ಚಾಲು ಸಮೀಪದ ಪುದುಕೋಳಿಯ ಕೃಷ್ಣಮೂರ್ತಿ ಎಂಬವರ ಪುತ್ರನ ಸಮಾರಂಭಕ್ಕೆ ವಿಶೇಷ ಕೊಡುಗೆಯ ಮೂಲಕ ಗಮನಸೆಳೆದಿದ್ದಾರೆ.
ಸಮಾರಂಭದ ಒಂದು ದಿನದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ಕಲಾವಿದರಿಗೆ ಭಾರತದ ಕರೆನ್ಸಿಯ ನೋಟುಗಳಲ್ಲಿ ಇತ್ತೀಚೆಗೆ ನಿಷೇಧಿಸಲ್ಟಟ್ಟ ಒಂದು ಸಾವಿರ ಮುಖ ಬೆಲೆಯ ನೋಟನ್ನು ಹೋಲುವ ಬೆಳ್ಳಿ ಲೇಪನದ ನೆನಪಿನ ಪತ್ರವನ್ನು ತಯಾರಿಸಿ ಹಂಚಿದ್ದಾರೆ.
ಗಾಂಧಿಯ ಚಿತ್ರ, ಒಂದು ಸಾವಿರವೆಂದು ಬರೆದಿರುವ ಮೌಲ್ಯ ಸೂಚಕದೊಂದಿಗೆ ಈ ಕೊಡುಗೆ ಗಮನ ಸೆಳೆದಿದೆ. ಒಂದು ನೆನಪಿನ ಪ್ರತಿಗೆ ಸುಮಾರು 800 ರೂ ಖರ್ಚಾಗಿದೆಯೆಂದು ಪತ್ರಿಕೆಗೆ ಕೃಷ್ಣಮೂರ್ತಿ ತಿಳಿಸಿದ್ದಾರೆ.