ಮಂಗಳೂರಿನಲ್ಲಿ ರಸ್ತೆ ಹೆಸರಿನ ವಿವಾದ

ವಿವೇಕಾನಂದ ರಸ್ತೆ ಎಂದು ಬಿಜೆಪಿ ಹೇಳಿದರೆ, ಇದು ಜೋಗಿ ಮಠ ರಸ್ತೆ ಎಂದ ಕಾಂಗ್ರೆಸ್

ಮಂಗಳೂರು : ರಸ್ತೆಗಳ ಹೆಸರಿನ ಬಗ್ಗೆ ರಾಜಕೀಯ ಪಕ್ಷಗಳು ಕಚ್ಚಾಡುವುದು ಹೊಸ ವಿಚಾರವೇನಲ್ಲ. ವಿವಿಧೆಡೆ ನಡೆದ ಇಂತಹ ಹಲವಾರು ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತವೆ. ಇತ್ತೀಚೆಗೆ ಮಂಗಳೂರು ಕೂಡ ಇಂತಹ ಒಂದು ರಸ್ತೆ ಹೆಸರಿನ ವಿವಾದಕ್ಕೆ ಸಾಕ್ಷಿಯಾಯಿತು. ನಗರದ ಕದ್ರಿಯಲ್ಲಿನ ಸಕ್ರ್ಯೂಟ್ ಹೌಸ್ ಸಮೀಪದ ರಸ್ತೆಯೊಂದರಲ್ಲಿ ಇತ್ತೀಚೆಗೆ `ಸ್ವಾಮಿ ವಿವೇಕಾನಂದ ರಸ್ತೆ’ ಎಂಬ ಫಲಕ ಕಾಣಿಸಿಕೊಂಡರೆ ಕೆಲವೇ ಗಂಟೆಗಳಲ್ಲಿ ಈ ಫಲಕದ ಬದಲು `ಕದ್ರಿ ಜೋಗಿ ಮಠ ರಸ್ತೆ” ಎಂಬ ಇನ್ನೊಂದು ಫಲಕ ಕಾಣಿಸಿಕೊಂಡಿತು. ರಸ್ತೆ ಹೆಸರಿನ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಕೆಸರೆರಚಾಟವೇ ಇದಕ್ಕೆ ಕಾರಣ.
ಎಲ್ಲವೂ ಆರಂಭವಾಗಿದ್ದು ಗುರುವಾರದಂದು. ಅಂದು ವಿವೇಕಾನಂದ ಜಯಂತಿ ಆಚರಣೆಯಾಗಿದ್ದುದರಿಂದ ಕದ್ರಿ ವಾರ್ಡಿನ ಕಾರ್ಪೊರೇಟರ್ ರೂಪಾ ಡಿ ಬಂಗೇರ ಅವರು “ಸ್ವಾಮಿ ವಿವೇಕಾನಂದ ರಸ್ತೆ” ಎಂಬ ನಾಮಫಲಕವನ್ನು ಇಲ್ಲಿ ಅಳವಡಿಸಿದ್ದರೆ ಅದನ್ನು ಕದ್ರಿ ಜೋಗಿ ಮಠದ ಸ್ವಾಮಿ ಸಹಿತ ಹಲವು ಬಿಜೆಪಿ ನಾಯಕರುಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗಿತ್ತು.
ಆದರೆ ಎರಡೇ ಗಂಟೆಗಳಲ್ಲಿ ಈ ರಸ್ತೆ ನಾಮಫಲಕ ಅಲ್ಲಿಂದ ಕಾಣೆಯಾಗಿತ್ತು. ಅದನ್ನು ಮಹಾನಗರಪಾಲಿಕೆ ಅಧಿಕಾರಿಗಳು ಕಿತ್ತು ಹಾಕಿದ್ದರು. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಮೇಯರ್ ಹರಿನಾಥ್, ಈ ರಸ್ತೆಯ ಮೂಲ ಹೆಸರು `ಕದ್ರಿ ಜೋಗಿ ಮಠ ರಸ್ತೆ” ಆಗಿತ್ತು ಎಂದಿದ್ದಾರೆ. “ಈ ಹೆಸರಿನ ನಾಮಫಲಕ ಇದ್ದರೂ ಬಿಜೆಪಿ ಕಾರ್ಪೊರೇಟರ್ ಅದನ್ನು ತೆಗೆದು ಹೊಸ ನಾಮಫಲಕ ಅಳವಡಿಸಿದ್ದರಿಂದ ಅದನ್ನು ತೆಗೆದು ಹಾಕಲಾಯಿತು” ಎಂದು ಮೇಯರ್ ತಿಳಿಸಿದ್ದರು.
ಅತ್ತ ರೂಪಾ ಬಂಗೇರ ಪ್ರಕಾರ ಅವರೇನೂ ಈ ರಸ್ತೆಯ ಹೆಸರು ಬದಲಾಯಿಸಿಲ್ಲ. “ಈ ರಸ್ತೆ ಹಿಂದಿನಿಂದಲೂ ವಿವೇಕಾನಂದ ರಸ್ತೆ ಎಂದೇ ಕರೆಯಲ್ಪಡುತ್ತಿತ್ತು” ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ವಾರ್ಡ್ ನಕ್ಷೆಯಲ್ಲೂ ಹಾಗೆಯೇ ನಮೂದಿಸಲಾಗಿದೆ ಎಂದ ರೂಪಾ “ಈ ನಾಮಫಲಕವನ್ನು ನನ್ನ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 50,000 ವೆಚ್ಚದಲ್ಲಿ ಅಳವಡಿಸಲಾಗಿದೆ. ಯಾವುದೇ ರಾಜಕೀಯ ಉದ್ದೇಶವಿಲ್ಲ, ನಾಮಫಲಕದಲ್ಲಿ ಮನಪಾ ಲಾಂಛನ ಕೂಡ ಇದೆ. ಸಣ್ಣ ಕಾರ್ಯಕ್ರಮವಾಗಿದ್ದರಿಂದ ಮೇಯರ್ ಅವರನ್ನು ಆಹ್ವಾನಿಸಿರಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.