ವೈರಲ್ ಕಣ್ ಮಿಟುಕಿನ ನಂತರ ವಿವಾದ

ಕರಾವಳಿ ಅಲೆ ವರದಿ

 ಕೊಚ್ಚಿ : ತನ್ನ ಒಂದೇ ಒಂದು ಕಣ್ ಮಿಟುಕಿನಿಂದ  ದೇಶಾದ್ಯಂತ ನೆಟ್ಟಿಗರ ಮನಸೂರೆಗೊಂಡ ಕೇರಳದ 18ರ ಯುವತಿ ಪ್ರಿಯಾ ಪ್ರಕಾಶ್ ವಾರಿಯರ್ ರಾತ್ರಿ ಬೆಳಗಾಗುವುದರೊಳೆ ಇಂಟರ್ನೆಟ್ ಸೆನ್ಸೇಶನ್ ಆಗಿರುವಂತೆಯೇ ಈ ಹಾಡು ಹಾಗೂ ಹಾಡಿನ ದೃಶ್ಯ ವಿವಾದಕ್ಕೀಡಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಓಮರ್ ಲುಲು ಅವರ ಮಲಯಾಳಂ ಚಿತ್ರ `ಒರು ಅಡಾರ್ ಲವ್’  ಚಿತ್ರದ ಮಣಿಕ್ಯ ಮಲರಾಯ ಪೂವಿಯ ವೀಡಿಯೋವೊಂದನ್ನು ಯುಟ್ಯೂಬಿನಲ್ಲಿ ಉಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಈಗ ಚರ್ಚೆಗಳು

ಹುಟ್ಟಿಕೊಂಡಿವೆ. ಇದಕ್ಕೆ ಕಾರಣ ಹೈದರಾಬಾದಿನಲ್ಲಿ ದಾಖಲಿಸಲ್ಪಟ್ಟಿರುವ ಪೊಲೀಸ್ ದೂರು. ಈ ಹಾಡು  ಒಂದು ನಿರ್ದಿಷ್ಟ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದೆ ಎಂಬುದು ದೂರುದಾರರ ಆರೋಪವಾಗಿದೆ.

ಚಿತ್ರದ ಹಾಡಿನ ಸಾಹಿತ್ಯದಲ್ಲಿ ಪ್ರವಾದಿ ಮೊಹಮ್ಮದ್ ಮತ್ತವರ ಪತ್ನಿ ಹಜ್ರತ್ ಖದೀಜಾ ಬಗ್ಗೆ ಉಲ್ಲೇಖಿಸಿದೆ ಹಾಗೂ ಇದು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು  ಕೆಲ ವ್ಯಕ್ತಿಗಳು ಬುಧವಾರ ಫಲಕ್ನುಮ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಹಾಡಿನ ಸಾಹಿತ್ಯ ಹಾಗೂ ದೃಶ್ಯಗಳ ವಿರುದ್ಧವೂ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಎಸಿಪಿ ಸಯ್ಯದ್ ಫೈಸಲ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಚಿತ್ರ ನಿರ್ಮಾತೃ ಲುಲು “ನಾವು ಈ ಹಾಡಿನ ಸಾಹಿತ್ಯದ ಮೂಲಕ ಯಾರನ್ನೂ ನೋಯಿಸುವ ಉದ್ದೇಶ ಹೊಂದಿಲ್ಲ. ದುರದೃಷ್ಟವಶಾತ್ ದೂರೊಂದು ದಾಖಲಾಗಿದೆ” ಎಂದಿದ್ದಾರಲ್ಲದೆ ತಮಗೆ ಹಲವಾರು ಜನರ ಬೆಂಬಲವೂ ದೊರಕಿದೆ ಎಂದು ತಿಳಿಸಿದ್ದಾರೆ.

 

LEAVE A REPLY