ಜಯಲಲಿತಾ ಒಲ್ಲದ ನಟಿ, ರಾಜಕಾರಣಿಯಾಗಿದ್ದರೂ ಯಶಸ್ಸಿನ ಉತ್ತುಂಗಕ್ಕೇರಿದ್ದ ಜಯ

ಚಿತ್ರರಂಗ ಹಾಗೂ ರಾಜಕೀಯ ರಂಗಗಳೆರಡರಲ್ಲೂ ಮಿಂಚಿದ್ದ ಜಯಲಲಿತಾ ಎರಡೂ ಕ್ಷೇತ್ರಗಳಿಗೆ ಒಲ್ಲದ ಮನಸ್ಸಿನಿಂದಲೇ ಕಾಲಿಟ್ಟವರು. ನನಗೆ ಸಿನಿಮಾವೆಂದರೆ ದ್ವೇಷ. ಆದರೆ ನನ್ನ ತಾಯಿ ಚಿತ್ರಗಳಲ್ಲಿ ನಟಿಸುವಂತೆ ನನಗೆ ಬಲವಂತಪಡಿಸಿದರು. ನಾನು ರಾಜಕೀಯವನ್ನು ದ್ವೇಷಿಸುತ್ತೇನೆ, ಆದರೆ ಎಂಜಿಆರ್ ನನ್ನನ್ನು ರಾಜಕೀಯಕ್ಕೆ ಬರುವಂತೆ ಬಲವಂತಪಡಿಸಿದರು  ಎಂದು `ದಿ ಹಿಂದು’ ಪತ್ರಿಕೆಯ ಎನ್ ರಾಮ್ ಜತೆ ಖಾಸಗಿ ಸಂಭಾಷಣೆಯೊಂದರ ವೇಳೆ ಜಯಲಲಿತಾ ತಮ್ಮ ಮನಸ್ಸಿನಲ್ಲಿದ್ದ ಭಾವನೆಯನ್ನು ಹೊರಗೆಡಹಿದ್ದರು.
ನಿಮಗೆ ಒಂಟಿತನದ ಅನುಭವವಾಗುತ್ತಿದೆಯೇ? ಎಂದು ಕೇಳಿದಾಗ ತಮ್ಮ ಆತ್ಮೀಯೆ ಶಶಿಕಲಾ ಅವರತ್ತ ಬೊಟ್ಟು ಮಾಡುತ್ತಾ ನನ್ನ ಆರೈಕೆ ಮಾಡುತ್ತಿರುವ ಸಹೋದರಿಯೊಬ್ಬಳು ನನಗಿದ್ದಾಳೆ. ನನ್ನ ತಾಯಿ ಜೀವಂತವಾಗಿದ್ದಿದ್ದರೆ ಆಕೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನ ಪಕ್ಷ ಕಾರ್ಯಕರ್ತರು ಕೂಡ ನನ್ನ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಜಯಲಲಿತಾ ಹೇಳಿದ್ದರು.
ಪ್ರತಿಭಾನ್ವಿತ ನಟಿಯಾಗಿದ್ದ ಜಯಲಲಿತಾ ಅಷ್ಟೇ ಜನಪ್ರಿಯ ಹಾಗೂ ಪ್ರಬಲ ರಾಜಕಾರಣಿಯಾಗಿದ್ದರು. ತಮ್ಮ ಪಕ್ಷವನ್ನು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟಿದ್ದರು ಎಐಎಡಿಎಂಕೆಯ ಈ ಅಧಿನಾಯಕಿ. ತಾವು ನೈಸರ್ಗಿಕವಾಗಿ ನಾಯಕತ್ವ ಗುಣಗಳನ್ನು ಹೊಂದಿದವರು ಹಾಗೂ ತಮ್ಮ ಗುರು ಎಂ ಜಿ ರಾಮಚಂದ್ರನ್ ಅವರ ನಿಜವಾದ ಉತ್ತರಾಧಿಕಾರಿಯೆಂದು ಅವರು 1989ರಲ್ಲಿ ಬೊಡಿನಯಕನೂರು ವಿಧಾನಸಭಾ ಕ್ಷೇತ್ರದಿಂದ ಎಐಎಡಿಎಂಕೆ ಪಕ್ಷದ ಒಂದು ಬಣದ ನಾಯಕತ್ವ ವಹಿಸಿದ್ದ ಸಮಯ ಗೆದ್ದು ಸಾಬೀತುಪಡಿಸಿದ್ದರು. ಆಗ ಇನ್ನೊಂದು ಬಣದ ನೇತೃತ್ವ ವಹಿಸಿದ್ದ ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಅಂಡಿಪಟ್ಟಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಇದೇ ಕ್ಷೇತ್ರದಿಂದ ಅವರ ಪತಿ 1984ರಲ್ಲಿ ಅಮೆರಿಕಾದ ಆಸ್ಪತ್ರೆಯಲ್ಲಿದ್ದುಕೊಂಡೇ ವಿಜಯ ಸಾಧಿಸಿದ್ದರು.
ಕಾನ್ವೆಂಟ್ ಶಿಕ್ಷಣ ಪಡೆದಿದ್ದ ಜಯಲಲಿತಾ ಮೊದಲಾಗಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಹಾಗೂ ನಂತರ ಚೆನ್ನೈನ ಚರ್ಚ್ ಪಾರ್ಕ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಆಕೆ ಕೆಲ ಸಂದರ್ಶನಗಳಲ್ಲಿ ತಮಗೆ ರಾಂ ಜೇಠ್ಮಲಾನಿ ಅಥವಾ ಫಾಲಿ ಎಸ್ ನಾರಿಮನ್ ಅವರಂತೆ ಖ್ಯಾತ ವಕೀಲರಾಗಬೇಕೆಂಬ ಇಚ್ಛೆಯಿತ್ತು ಎಂದಿದ್ದರು.
ಆದರೆ ಕೌಟುಂಬಿಕ ಕಾರಣಗಳಿಂದಾಗಿ ಆಕೆ ಚಿತ್ರರಂಗ ಪ್ರವೇಶಿಸಬೇಕಾಗಿ ಬಂದಿತ್ತು. ಮನೆಯಲ್ಲಿ ನಾನು ಬಿರುಗಾಳಿಯೆಬ್ಬಿಸಿದೆ, ಅತ್ತು ಬಿಟ್ಟೆ, ಚಿತ್ರರಂಗ ಪ್ರವೇಶಿಸುವುದಿಲ್ಲ ಎಂದು ಜಗಳವಾಡಿದೆ. ಆದರೆ ಏನೂ ಪ್ರಯೋಜನವಾಗಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಜಯಲಲಿತಾ ನೆನಪಿಸಿಕೊಂಡಿದ್ದರು. ಆಕೆ ಪ್ರಪ್ರಥಮವಾಗಿ ನಾಯಕಿಯಾಗಿ ಅಭಿನಯಿಸಿದ್ದು ಸಿ ವಿ ಶ್ರೀಧರ್ ಅವರ ನಿರ್ದೇಶನದ `ವೆನ್ನಿರ ಆಡೈ’ ಎಂಬ ತಮಿಳು ಚಿತ್ರ. ಇದಕ್ಕೂ ಮುಂಚೆ ಆಕೆ ಕೆಲ ಕನ್ನಡ ಚಿತ್ರಗಳಲ್ಲಿ ಕಲಾವಿದೆಯಾಗಿ ಕಾಣಿಸಿಕೊಂಡಿದ್ದರು.
ಅವರ ಕುಟುಂಬ ಶ್ರೀರಂಗಂ ಮೂಲದ್ದಾಗಿದ್ದರೂ ಅವರ ತಾತ ರಂಗಸ್ವಾಮಿ ಐಯ್ಯಂಗಾರ್ ಬೆಂಗಳೂರಿನಲ್ಲಿ ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ತಂದೆ, ವಕೀಲರಾಗಿದ್ದ ಜಯರಾಂ ಆಕೆ ಎರಡು ವರ್ಷದವಳಿರುವಾಗಲೇ ಮೃತಪಟ್ಟಿದ್ದರು. ತಮ್ಮ ಚಿತ್ರರಂಗದ ಹೆಸರಾದ ಸಂಧ್ಯಾ ಹೆಸರಿನಿಂದಲೇ ಜನಪ್ರಿಯರಾಗಿದ್ದ ಆಕೆಯ ತಾಯಿ ವೇದವಲ್ಲಿ ಚಿತ್ರ ರಂಗ ಪ್ರವೇಶಿಸುವುದಕ್ಕಿಂತ ಮುಂಚೆ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಜಯಲಲಿತಾ ತಮ್ಮ ಮೊದಲ ಚಿತ್ರದಲ್ಲಿ ನಟಿಸುತ್ತಿರುವಾಗಲೇ ನಿರ್ದೇಶಕ ಬಿ ಆರ್ ಪಂತುಲು ಅವರನ್ನು `ಆಯಿರಥಿಲ್ ಒರುವನ್’ ಚಿತ್ರಕ್ಕೆ ಆಯ್ದುಕೊಂಡಿದ್ದರು. ಈ ಚಿತ್ರವೇ ತಮ್ಮ ರಾಜಕೀಯ ಪ್ರವೇಶಕ್ಕೆ ನಾಂದಿಯಾಯಿತು ಎಂದು ಜಯಲಲಿತಾ ಒಮ್ಮೆ ಹೇಳಿಕೊಂಡಿದ್ದರು. ಅದೊಂದು ಯಶಸ್ವಿ ಚಿತ್ರವಾಗಿತ್ತು. ಅದು ನನಗೆ ಎಂಜಿಆರ್ ಅವರನ್ನು ಭೇಟಿಯಾಗಿ ಮಾತನಾಡುವ ಅವಕಾಶವೊದಗಿಸಿತ್ತು ಎಂದು ಚಿತ್ರ ಬಿಡುಗಡೆಯಾಗಿ 50 ವರ್ಷಗಳು ಪೂರ್ತಿಯಾದ ಸಂದರ್ಭ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡುತ್ತಾ ಅವರು ಹೇಳಿದ್ದರು.
ಒಲ್ಲದ ಮನಸ್ಸಿನಿಂದಲೇ ನಟನಾ ವೃತ್ತಿಯನ್ನು ಆಯ್ದುಕೊಂಡಿದ್ದ ಜಯಲಲಿತಾ ನೀರಿನಲ್ಲಿದ್ದ ಮೀನಿನಂತೆ ಸಲೀಸಾಗಿ ನಟಿಸಲು ಆರಂಭಿಸಿದ್ದರು. ಭರತನಾಟ್ಯವನ್ನು ಕೆ ಜೆ ಸರಸಾ ಅವರಿಂದ ಕಲಿತಿದ್ದ ಜಯಲಲಿತಾ ಅವರ ಆರಂಗ್ರೇಟಂ ಶಿವಾಜಿ ಗಣೇಶನ್ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು.
ಮುಂದೆ ಅವರು ಹಾಗೂ ಎಂಜಿಆರ್ 28 ಚಿತ್ರಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಆದರೆ 1973ರಲ್ಲಿ ಎಂಜಿಆರ್ ಜತೆ ಮುನಿಸಿಕೊಂಡ ಜಯಲಲಿತಾ 1982ರಲ್ಲಿ ತಾವು ಎಐಎಡಿಎಂಕೆ ಸದಸ್ಯತ್ವ ಪಡೆದು ಕಡ್ಡಲೋರ್ ನಗರದಲ್ಲಿ ಪಕ್ಷದ ಸಮ್ಮೇಳನವೊಂದರಲ್ಲಿ ಭಾಗವಹಿಸಿದ ನಂತರ ಮತ್ತೆ ಎಂಜಿಆರ್ ಜತೆ ಸೇರಿಕೊಂಡಿದ್ದರು.
ಮಾರ್ಚ್ 24, 1984ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಅವರು ಕುಳಿತುಕೊಳ್ಳುತ್ತಿದ್ದ ಆಸನ ಸಂಖ್ಯೆ 185 ಆಗಿತ್ತು. ಇದೇ ಆಸನದಲ್ಲಿ ಡಿಎಂಕೆ ಸ್ಥಾಪಕ ಸಿ ಎನ್ ಅಣ್ಣಾದೊರೈ ಕುಳಿತುಕೊಳ್ಳುತ್ತಿದ್ದರು.
ರಾಜಕೀಯ ಪರಿಸ್ಥಿತಿಯನ್ನು ಅರ್ಥೈಸುವಲ್ಲಿ ನಿಪುಣೆಯಾಗಿದ್ದ ಜಯಲಲಿತಾ 1998ರ ಲೋಕಸಭಾ ಚುನಾವಣೆಯ ನಂತರ ತಾವು ಮತ್ತೆ ಉನ್ನತಿಗೇರುವುದಾಗಿ ಅರಿತಿದ್ದರು. ವೈಕೋ ನೇತೃತ್ವದ ಎಂಡಿಎಂಕೆ ಹಾಗೂ ಎಸ್ ರಾಮದೋಸ್ ನೇತೃತ್ವದ ಪಿಎಂಕೆ ಹಾಗೂ ವಝಪಡಿ ಕೆ ರಾಮಮೂರ್ತಿ ಜತೆ ಸೇರಿ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ್ದರು.
ಆದರೆ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಜಯಲಲಿತಾ ಬೆಂಬಲ ಹಿಂದೆಗೆದುಕೊಂಡ ಪರಿಣಾಮ 1999ರಲ್ಲಿ ಮತ್ತೊಂದು ಚುನಾವಣೆ ನಡೆಯುವಂತಾಯಿತಲ್ಲದೆ ಮುಂದೆ ಎಐಎಡಿಎಂಕೆ ಕೇಂದ್ರ ಸರಕಾರದ ಭಾಗವಾಗುವ ಅವಕಾಶದ ಬಾಗಿಲು ಮುಚ್ಚಿದಂತಾಗಿತ್ತು. ಈ ಪರಿಸ್ಥಿತಿಯ ಲಾಭವನ್ನು ಡಿಎಂಕೆ ಪಡೆದುಕೊಂಡು 2013ರ ತನಕ ಅಧಿಕಾರವನ್ನು ಅನುಭವಿಸಿತು.