ಪುತ್ತೂರಿನಲ್ಲಿ ಬೇಡಿ ತಿನ್ನುವ ಮುಸ್ಲಿಂ ಕುಟುಂಬ

ಇದು ವೃದ್ಧ ತಾಯಿ, ಮಗಳ ಕಣ್ಣೀರ ಕಥೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು :  ಕೆಲವರ ಬದುಕಲ್ಲಿ ವಿಧಿ ಏನೆಲ್ಲಾ ಆಟ ಆಡುತ್ತದೆ ಅನ್ನುವುದಕ್ಕೆ ಈ ಕುಟುಂಬ ಉದಾಹರಣೆ. ಇದ್ದ ಒಬ್ಬ ಮಗನನ್ನು ಕೂಡ ಕಿತ್ತುಕೊಂಡ ದೇವರು ತಾಯಿಯನ್ನು ಅನಾಥ ಮಾಡಿಬಿಟ್ಟಿದ್ದಾನೆ. ವಾಸ ಮಾಡಲು ಸರಿಯಾದ ಸೂರಿಲ್ಲದೆ, ತಿನ್ನಲು ಆಹಾರವಿಲ್ಲದೆ ಜೀವನ ಸಾಗಿಸುವ ಈ ತಾಯಿ, ಮಗಳ ಜೀವನ ಸಾಗುತ್ತಿರುವುದು ವಿಧವಾ ವೇತನದಿಂದ ಮಾತ್ರ. ಇವರ ಮನೆಯಲ್ಲಿ ನಿತ್ಯವೂ ಕಣ್ಣೀರೇ ತುಂಬಿಕೊಂಡಿದೆ.  ಈ ದೃಶ್ಯವನ್ನು ನೋಡಬೇಕಾದರೆ ಪುತ್ತೂರು ನಗರದ ಬೊಳುವಾರು ಮಿಷನ್ ಗುಡ್ಡೆಗೆ ತರಳಬೇಕು. ಇಲ್ಲಿ ಮುರುಕಲು ಮನೆಯಲ್ಲಿ  96ರ ವೃದ್ಧೆ ಫಾತಿಮಾ ಹಾಗೂ 68ರ ಹರೆಯದ ಸಾರಮ್ಮ ವಾಸವಾಗಿದ್ದಾರೆ.

ಅಪಘಾತದಲ್ಲಿ ಸತ್ತ

ಒಬ್ಬನೇ ಮಗ

ತಾನೊಂದು ಬಗೆದರೆ ವಿಧಿ ಬೇರೇನೋ ಪ್ಲಾನ್ ಮಾಡುತ್ತದೆಯಂತೆ.  ಸಾರಮ್ಮರವರ ಇಬ್ಬರು ಮಕ್ಕಳಲ್ಲಿ ಮುಂದಿನ ಜೀವನಕ್ಕೆ ಆಧಾರವಾಗಬೇಕಿದ್ದ ಮಗ ಮಹಮ್ಮದ್ ಅಪಘಾತಕ್ಕೆ ಬಲಿಯಾದ. ಮಗ ಮರಣ ಹೊಂದಿ ಸುಮಾರು 18 ವರ್ಷಗಳು ಕಳೆದುಹೋಗಿವೆ. ಮಗನ ಸಾವಿನಿಂದ ಕಂಗಾಲಾದ ಸಾರಮ್ಮ ಬದುಕಿನ ಎಲ್ಲಾ ಆಸೆಗಳನ್ನು ಕಳೆದುಕೊಂಡರು. ತನ್ನ ಮುಂದಿನ ಜೀವನಕ್ಕೆ ಆಧಾರವಾಗಿರಬೇಕಾಗಿದ್ದ ಮಗನನ್ನು ಅಲ್ಲಾಹು ತನ್ನಿಂದ ಕಸಿದುಕೊಂಡ ಎಂಬ ಕೊರಗು ಅವರನ್ನು ಇಂದಿಗೂ ಕಾಡುತ್ತಲೇ ಇದೆ.

96ರ ವೃದ್ಧೆ ತಾಯಿ

ಒಂದು ಕಡೆಯಲ್ಲಿ ಮಗನ ಆಕಸ್ಮಿಕ ಮರಣ ಸಾರಮ್ಮರವರ ಕನಸುಗಳನ್ನು ನುಚ್ಚು ನೂರು ಮಾಡಿಬಿಟ್ಟರೆ, ಇನ್ನೊಂದು ಕಡೆಯಲ್ಲಿ ತನ್ನ ವೃದ್ಧ ತಾಯಿ ಫಾತಿಮಾರವರನ್ನು ನೋಡಿಕೊಳ್ಳಬೇಕಾಗಿ ಬಂತು. 96 ವರ್ಷಗಳ ವೃದ್ಧೆ ತಾಯಿಯ ಎಲ್ಲಾ ಚಾಕರಿಗಳನ್ನು ಸಾರಮ್ಮರವರೇ ಮಾಡಬೇಕಾಗಿದೆ.

ಆದಾಯವಿಲ್ಲದ ಕುಟುಂಬಕ್ಕೆ ವಿಧವಾ ವೇತನವೇ ಆದಾಯ.

ಸಾರಮ್ಮರವರ ಕುಟುಂಬಕ್ಕೆ ಯಾವುದೇ ಆದಾಯವಿಲ್ಲ. ಅವರು ಈ ಹಿಂದೆ ಬೀಡಿ ಕಟ್ಟಿ ತಾಯಿ ಮತ್ತು ಮನೆಯ ಖರ್ಚು ವೆಚ್ಚ ನೋಡಿಕೊಳ್ಳುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಆರೋಗ್ಯದ ಸಮಸ್ಯೆಯಿಂದ ಸಾರಮ್ಮ ಯಾವುದೇ ಕೆಲಸ ಮಾಡುತ್ತಿಲ್ಲ. ಸರಕಾರದಿಂದ ಸಿಗುವ ವಿಧವಾ ವೇತನ ಮತ್ತು ಫಾತಿಮಾರವರಿಗೆ ಸಿಗುವ ವೃದ್ಯಾಪ್ಯ ವೇತನ ಒಟ್ಟು 1 ಸಾವಿರ ರುಪಾಯಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ.

ತಾಯಿಗೆ ಆಗಿದ್ದಾಗ್ಗೆ ಕಾಡುವ ಆರೋಗ್ಯ ಸಮಸ್ಯೆಯಿಂದ ಸಾರಮ್ಮರವರು ಕಂಗಾಲಾಗಿ ಹೋಗಿದ್ದಾರೆ. ಬಿಪಿಎಲ್ ಕಾರ್ಡಿನ ಅಕ್ಕಿ ಹಾಗೂ ನೆರೆಹೊರೆಯವರು, ಸಂಬಂಧಿಕರು ನೀಡುವ ಒಂದಿಷ್ಟು ಪದಾರ್ಥಗಳೇ ಇವರ ಹಸಿವನ್ನು ನೀಗಿಸಬೇಕಾಗಿದೆ.

ಸಾರಮ್ಮರವರ ಮನೆಯನ್ನು ನೋಡಿದರೆ ಇಂದಲ್ಲ ನಾಳೆ ಬಿದ್ದು ಹೋಗುವಂತಿದೆ. ಮಣ್ಣಿನ ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಹಂಚುಗಳು ಕಳಚಿಕೊಂಡಿದ್ದು ಮಳೆಗಾಲದಲ್ಲಿ ನೀರು ಸೋರುತ್ತಿದೆ. ಸರಕಾರದ ಬಿಪಿಎಲ್ ಕಾರ್ಡ್, ವೋಟರ್  ಐ ಡಿ,ಆಧಾರ್ ಕಾರ್ಡ್ ಎಲ್ಲವೂ ಇದೆ. ಆದರೆ ಸ್ವಂತ ಜಾಗ, ನೆಮ್ಮದಿಯ ಸೂರು ಮಾತ್ರ ಇಲ್ಲ. ಬಾಷೆಲ್ ಮಿಷನ್ ಗುಡ್ಡೆಯಲ್ಲಿ ಸುಮಾರು 150 ವರ್ಷಗಳ ಹಳೇಯದಾದ ಬಿದ್ದು ಹೋಗಲು ರೆಡಿಯಾಗಿರುವ ಮನೆಯಲ್ಲಿ ದಿನದೂಡುತ್ತಿದ್ದಾರೆ ಸಾರಮ್ಮ, ಫಾತಿಮಾ.

ಪುತ್ತೂರಿನಲ್ಲಿ ನೂರಾರು ಸಂಘಟನೆಗಳು ಕಾರ್ಯಚರಿಸುತ್ತಿವೆ. ಬಡವರಿಗೆ ಸಹಾಯ ಮಾಡಲೆಂದೇ ಅನೇಕ ಮಂದಿ ನಿತ್ಯವೂ ಹಣ ಸಂಗ್ರಹದಲ್ಲೇ ಇರುತ್ತಾರೆ. ಆದರೆ ಸಾರಮ್ಮರಂತಹ ಬಡ ಕುಟುಂಬ ಇವರ ಕಣ್ಣಿಗೆ ಬೀಳದೇ ಇರುವುದು ವಿಪರ್ಯಾಸವೇ ಸರಿ.