ಕಾರಸ್ಟ್ರೀಟ್ ಕಾಲೇಜಿನಲ್ಲೊಂದು ಸಾರ್ಥಕತೆಯ ಮಧ್ಯಾಹ್ನದೂಟ

ಕರಾವಳಿ ಅಲೆ ವರದಿ

ಮಂಗಳೂರು :  ನಗರದ ಕಾರಸ್ಟ್ರೀಟಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಮಧ್ಯಾಹ್ನದ ಊಟ ಯೋಜನೆಯನ್ನು  ಬುಧವಾರ ಉದ್ಘಾಟಿಸಿದ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ  ಯು ಟಿ ಖಾದರ್ ಈ ಸಂದರ್ಭ  ವಿದ್ಯಾರ್ಥಿಗಳ ಜತೆಗೆ ಕುಳಿತು  ಊಟವನ್ನೂ ಸವಿದರು.

ಅಂದ ಹಾಗೆ ಈ ಊಟ ಸವಿಯುವಾಗ ಅಲ್ಲೊಂದು ಸಾರ್ಥಕತೆಯ ಭಾವನೆಯೂ ಇತ್ತು. ಈ ಊಟಕ್ಕಾಗಿ ಬೇಯಿಸಲಾಗಿದ್ದ ಅನ್ನ ಅದೇ ಸಂಸ್ಥೆಯ ವಿದ್ಯಾರ್ಥಿಗಳ ಶ್ರಮದ ಫಲವಾಗಿದೆ ಎಂಬುದು ವಿಶೇಷವಾಗಿತ್ತು.

ಸುಮಾರು 200 ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕೊಣಾಜೆಯ ಗದ್ದೆಗಳಲ್ಲಿ ಐದು ತಿಂಗಳು ಶ್ರಮ ವಹಿಸಿ 14 ಕ್ವಿಂಟಾಲ್ ಅಕ್ಕಿಯನ್ನು ಬೆಳೆಸಿದ್ದಾರೆ. ಈ ಯೋಜನೆಯನ್ನು ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಡಾ ನವೀನ್ ಕೊಣಾಜೆ,

ಪ್ರಾಂಶುಪಾಲರಾದ ರಾಜಶೇಖರ್ ಹೆಬ್ಬಾರ್ ಮತ್ತು ಉಪನ್ಯಾಸಕರೂ, ಎನ್ನೆಸ್ಸೆಸ್  ಅಧಿಕಾರಿಗಳೂ ಆಗಿರುವ ಜೆಫ್ರಿ ರಾಡ್ರಿಗಸ್ ಹಾಗೂ ನಾಗವೇಣಿ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತಲ್ಲದೆ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶವೂ ಇದರ ಹಿಂದಿತ್ತು.

ವಿದ್ಯಾರ್ಥಿಗಳು ಬೆಳೆಸಿದ ಅಕ್ಕಿಯಲ್ಲಿ  ಒಂದು ಕ್ವಿಂಟಾಲ್ ಅಕ್ಕಿಯನ್ನು  ಗದ್ದೆಯನ್ನು ಅವರಿಗೆ ಲೀಸಿಗೆ ನೀಡಿದ್ದ ಇಬ್ಬರು ರೈತರಿಗೆ ನೀಡಲಾಗುವುದಾದರೆ ಉಳಿದ 13 ಕ್ವಿಂಟಾಲ್ ಅಕ್ಕಿ  ಹಾಲಿ ಶೈಕ್ಷಣಿಕ ವರ್ಷದಲ್ಲಿರುವ ಉಳಿದ ಎರಡು ತಿಂಗಳುಗಳ ತನಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ  ಊಟಕ್ಕೆ ಸಾಕಾಗುವುದು.

 

LEAVE A REPLY