ಉಡುಪಿಯ ವಿಟ್ಲಪಿಂಡಿ ವೇಳೆ ಪೊಲೀಸ್ ಡ್ರೋನ್ ಕ್ಯಾಮರಾ ಬಿದ್ದು ವ್ಯಕ್ತಿ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕೃಷ್ಣ ಜನ್ಮಾಷ್ಟಮಿಯ ಎರಡನೇ ದಿನವಾದ ಉಡುಪಿಯ ರಥಬೀದಿಯಲ್ಲಿ ಗುರುವಾರ ನಡೆದ ವಿಟ್ಲಪಿಂಡಿ ಕಮ್ ಶ್ರೀಕೃಷ್ಣ ಲೀಲೋತ್ಸವದಲ್ಲಿ ರಥಬೀದಿ ಪರಿಸರದಲ್ಲಿ ಉಡುಪಿ ಪೊಲೀಸ್ ಇಲಾಖೆ ಭದ್ರತೆಗಾಗಿ ಆಳವಡಿಸಿದ್ದ ಡ್ರೋನ್ ಕ್ಯಾಮರಾ ಬ್ಯಾಟರಿ ಲೋ ಆಗಿ ಜನಜಗುಂಳಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಬಿದ್ದ ಪರಿಣಾಮ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದ್ದು, ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗುರುವಾರ ಮಠದ ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ನಡೆದಿತ್ತು. ಉತ್ಸವಕ್ಕೆ ನೂರಾರು ಭಕ್ತರು ಸೇರಿದ್ದರು. ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದರ ಪತ್ತೆಗಾಗಿ ಉಡುಪಿ ಪೊಲೀಸ್ ಇಲಾಖೆಯು ರಥಬೀದಿ ಪರಿಸರದ ಕಾಣಿಯೂರು ಮಠದ

ಬಳಿ ರಿಮೋಟ್ ಕಂಟ್ರೋಲ್ ಆಧರಿತ ಡ್ರೋನ್ ಕ್ಯಾಮರಾ ಅಳವಡಿಸಿತ್ತು. ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಲೀಲೋತ್ಸವ ರಥಬೀದಿಯಲ್ಲಿ ನಡೆಯುತ್ತಿದ್ದು, ಕಾಣಿಯೂರು ಮಠದ ಬಳಿ ಅಳವಡಿಸಿದ್ದ ಡ್ರೋನ್ ಕ್ಯಾಮರಾವು ಬ್ಯಾಟರಿ ಲೋ ಆಗಿ ನೆಲಕ್ಕೆ ಬೀಳುವ ವೇಳೆ ವ್ಯಕ್ತಿಯೊಬ್ಬರ ಕುತ್ತಿಗೆ ಮೇಲೆ ಬಿದ್ದಿದ್ದು, ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟುಬಿದ್ದಿದೆ ಎಂದು ತಿಳಿದುಬಂದಿದೆ.

ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.