ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಕುಟುಂಬ ಕುರಿತು ವಾಸ್ತವ ಮಾಹಿತಿಗಳ `ಅನಾವರಣ’

ಗುರುವಾಯನಕೆರೆ ಮೂಲದ ಜಂಟೀ ಕ್ರಿಯಾ ಸಮಿತಿ ಧರ್ಮಸ್ಥಳದ ಹೆಗ್ಗಡೆ ಕುಟುಂಬ ಹೊಂದಿರುವ ಅಕ್ರಮ ಆಸ್ತಿಪಾಸ್ತಿ ಕುರಿತು ಸಮಾಜ ಕಲ್ಯಾಣ ಸಚಿವ ಆಂಜನೇಯರಿಗೆ ಬರೆದಿರುವ ಪತ್ರದ ಯಥಾ ನಕಲು

ಮಾನ್ಯ ಶ್ರೀ ಎಚ್ ಆಂಜನೇಯ
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
ಕರ್ನಾಟಕ ಸರಕಾರ, ವಿಧಾನ ಸೌಧ, ಬೆಂಗಳೂರು

ಮಾನ್ಯರೇ,

ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರ ಕುರಿತು ಸತ್ಯ ಸಂಗತಿಗಳನ್ನೊಳಗೊಂಡ `ಅನಾವರಣ’ ಪುಸ್ತಕ ಜತೆಗಿರಿಸಿದ್ದೇವೆ. ಮಾಹಿತಿ ಹಕ್ಕಿನಲ್ಲಿ ಪಡೆದ ಸರಕಾರಿ ದಾಖಲೆಗಳು ಮತ್ತು ಸರಕಾರದ ತನಿಖಾ ಆದೇಶಗಳುಳ್ಳ `ಧರ್ಮಸೂಕ್ಷ್ಮ’ ಭಾಗ-1, ಭಾಗ-2ನ್ನೂ ಜತೆಗಿರಿಸಿದ್ದೇವೆ.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ತಮ್ಮಲ್ಲಿ ನಮ್ಮ ನಮ್ರ ಮನವಿ:

  1. ವೀರೇಂದ್ರ ಹೆಗ್ಗಡೆ ಕುಟುಂಬದ ಎಲ್ ಆರ್ ವೈ 72/74-75 ಘೋಷಣಾ ಪತ್ರದ ಮೇಲಾಗಿರುವ ಕಾನೂನುಬಾಹಿರ ಆದೇಶದಂತೆ, ಅವರು ಹೊಂದಿರುವ ಭೂಮಿ ಹಾಗೂ ಈ ಸಂಬಂಧ ಕಾನೂನು ಉಲ್ಲಂಘನೆಗಳ ವಿಚಾರಣಾ ಆದೇಶ ಗಮನಿಸಿ. ಈ ಪ್ರಕರಣದಲ್ಲಿ ಸಾವಿರಾರು ಎಕ್ರೆ ಭೂಮಿಯನ್ನು ಸರಕಾರ ಸ್ವಾಧೀನಪಡಿಸಿ ದಲಿತರಿಗೆ, ಭೂರಹಿತ ಬಡವರಿಗೆ ಹಂಚಬೇಕು.
  2. ಪುತ್ತೂರು ಸಹಾಯಕ ಆಯುಕ್ತರಾಗಿದ್ದೆ ಬಸವರಾಜ್ ಅವರು ಇವರ ಶಿಕ್ಷಣ ಸಂಸ್ಥೆ ಕಾನೂನು ಉಲ್ಲಂಘಿಸಿ ಖರೀದಿಸಿದ 25 ಕ್ರಯ ಪತ್ರ (132ಎಕ್ರೆ) 22.6.2015ರಂದು ರದ್ದುಗೊಳಿಸಿದ್ದಾರೆ. ಪ್ರತಿ ಲಗತ್ತಿಸಿದೆ. (ಮೇಲ್ಮನವಿ ಇದೆ). ಕಂದಾಯ ಇಲಾಖೆಯಿಂದ ಇವರ ಮತ್ತು ಇವರ ಸಂಸ್ಥೆಗಳ ಭೂ ಹಿಡುವಳಿಗಳ ಸಮಗ್ರ ವಿವರ ತಾವು ಪಡೆಯಬೇಕು ಹಾಗೂ ಅಕ್ರಮವಾಗಿ ಹೊಂದಿರುವ ಭೂಮಿ ಸ್ವಾಧೀನ ಪಡಿಸಿ ಬಡವರಿಗೆ ಹಂಚಬೇಕು.
  3. ಸರಕಾರ ಇವರಿಗೆ ಅನುದಾನವಾಗಿ ನೀಡಿದ ಸುಮಾರು 200 ಎಕ್ರೆ ಭೂಮಿ ಪೈಕಿ ಶರ್ತ ಉಲ್ಲಂಘಿಸಿ ಈಗಲೂ ಅನುಭವಿಸುತ್ತಿರುವ ಸುಮಾರು 100 ಎಕ್ರೆ ಭೂಮಿ ಹಿಂದಕ್ಕೆ ಪಡೆದು ಭೂರಹಿತರಿಗೆ ಹಂಚಬೇಕು. (ಪ್ರಕೃತಿ ಚಿಕಿತ್ಸಾಲಯದ 14.65 ಎಕ್ರೆ, ಟಿ.ಬಿ ಸೆನೆಟೋರಿಯಂನ 12.08 ಎಕ್ರೆ, ಹಷೇಂದ್ರರ ದರ್ಖಾಸ್ತು 7.59 ಎಕ್ರೆ ಇತ್ಯಾದಿ)
  4. ಸರಕಾರ ಇವರಿಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದಲ್ಲಿ 43.90 ಎಕ್ರೆ ಡಿಸಿ ಮನ್ನಾ ಭೂಮಿ ಶಿಕ್ಷಣ ಸಂಸ್ಥೆಗೆ ನೀಡಿದಾಗ ಪರ್ಯಾಯವಾಗಿ ಅವರಿಂದ ಭೂಮಿ ಪಡೆದಿರಲಿಲ್ಲ. ಈ ತಪ್ಪನ್ನು ಸರಿಪಡಿಸಲು ಅವರಿಂದ ಸಮಾನ ಪ್ರಮಾಣದಲ್ಲಿ ಭೂಮಿ ಪಡೆದು ದಲಿತರಿಗೆ ಹಂಚಬೇಕು.
  5. ಇವರ ದುಬಾರಿ ಬಡ್ಡಿ ಮೈಕ್ರೋಫೈನಾನ್ಸ್ ಮೂಲಕ ಕಾನೂನುಬಾಹಿರವಾಗಿ ಬಡವರಿಗೆ ವಿಧಿಸಿದ್ದ ಸಾವಿರಾರು ಕೋಟಿ ರೂಪಾಯಿ ಬಡ್ಡಿಯನ್ನು ಬಡವರಿಗೆ ಹಿಂದಿರುಗಿಸಲು ಕ್ರಮಕೈಗೊಳ್ಳಬೇಕು ಹಾಗೂ ಇವರ ಲಾಭದಾಯಕ ಬಡ್ಡಿ ವ್ಯವಹಾರ ನಿಲ್ಲಿಸಬೇಕು. ಧಾರ್ಮಿಕ ಕ್ಷೇತ್ರಗಳು ದಾನ ಮಾಡಬೇಕೇ ಹೊರತು ಬಡ್ಡಿ ವ್ಯವಹಾರ ಅಲ್ಲ.
  6. ಧರ್ಮಸ್ಥಳದಲ್ಲಿರುವ ತಲೆತಲಾಂತರದಿಂದ ದೇವಸ್ಥಾನಕ್ಕೆ ಸಂಬಂಧಿಸಿದ ವಿವಿಧ ಸೇವೆ ಸಲ್ಲಿಸುತ್ತಾ ಬಂದಿರುವ ಆದರೆ ದುಃಸ್ಥಿತಿಯಲ್ಲಿರುವ ನೂರಾರು ದಲಿತ ಕುಟುಂಬಗಳಿಗೆ ಕನಿಷ್ಠ 5 ಎಕ್ರೆ ಸ್ಥಳ, ಉತ್ತಮ ಮನೆ ಮತ್ತು ಇವರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವಂತೆ ಸರಕಾರ ಹೆಗ್ಗಡೆಯವರಿಗೆ ನಿರ್ದೇಶನ ನೀಡಬೇಕು. ಇಲ್ಲಿಯ ದಲಿತರ ಮತ್ತು ಮಲೆಕುಡಿಯರ ಸ್ಥಿತಿ ಅಧ್ಯಯನ ಮಾಡಲು ಮತ್ತು ನ್ಯಾಯ ಒದಗಿಸಲು ಸರಕಾರಿ ಮಟ್ಟದಲ್ಲಿ ವಿಶೇಷ ಸಮಿತಿ ರಚಿಸಬೇಕು.
  7. ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಯ ಸೆಕ್ಶನ್ 53ರ ಪ್ರಕಾರ ಎಲ್ಲಾ ಖಾಸಗಿ ದೇವಸ್ಥಾನಗಳೂ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಾಣಿಯಾಗಬೇಕಾದರೂ ಧರ್ಮಸ್ಥಳ ದೇವಸ್ಥಾನ ಇನ್ನೂ ನೋಂದಾಣಿಯಾಗಿಲ್ಲ. ಮಾತ್ರವಲ್ಲ ಮುಜರಾಯಿ ಸಚಿವರ ಟಿಪ್ಪಣಿ ಪ್ರಕಾರ ಧಾರ್ಮಿಕ ದತ್ತಿ ಆಯುಕ್ತರು ದ ಕ ಜಿಲ್ಲಾಧಿಕಾರಿಗಳಿಗೆ ಪದೇಪದೇ ಪ್ರಸ್ತಾವನೆ ಕಳಿಸಲು ಪತ್ರ ಬರೆದರೂ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ತಾವು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇವೆ.ಈ ದೇವಸ್ಥಾನದ ವಾರ್ಷಿಕ ಆದಾಯ ಅಂದಾಜು ರೂ 300ಕೋಟಿ ಇದ್ದರೂ ಇವರು ಆದಾಯಕರ ಇಲಾಖೆಗೆ ರೂ 127 ಕೋಟಿ ಎಂದಷ್ಟೇ ಕಾಣಿಸುತ್ತಿದ್ದಾರೆಂದು ಹೇಳಲಾಗಿದೆ.
  8. ಇವರ ಮತ್ತು ಇವರ ಸಂಸ್ಥೆಗಳ ಮೇಲೆ ಬೆಳ್ತಂಗಡಿ ಜೆಎಂಎಫ್‍ಸಿ ಕೋರ್ಟಿನಲ್ಲಿ ದಾಖಲಾಗಿರುವ 3 ಖಾಸಗಿ ಕ್ರಿಮಿನಲ್ ದೂರುಗಳು (ಸಿಸಿ 11/16, ಸಿಸಿ 14/16, ಸಿಸಿ 26/16 ಲಗತ್ತಿಸಿದೆ.) ಇತ್ಯರ್ಥವಾಗುವ ತನಕ ಮತ್ತು ಇವರ ಭೂ ಹಗರಣಗಳ ತನಿಖೆ ಮುಗಿಯುವ ತನಕ ಇವರಿಗೆ ಸರಕಾರಿ ಮಾನ್ಯತೆಗಳನ್ನು ಪ್ರಶಸ್ತಿಗಳನ್ನು ನೀಡಬಾರದು ಎಂದೂ ಇವರ ಸಭೆ ಸಮಾರಂಭಗಳಲ್ಲಿ ಭಾಗವಹಿಸಬಾರದೆಂದೂ ಭಾಗವಹಿಸಿದರೂ `ಅನಾವರಣ?’ದಲ್ಲಿರುವ 39 ವಾಸ್ತವಗಳಿಗೆ ಉತ್ತರಿಸುವಂತೆ ತಿಳಿಸಬೇಕಾಗಿಯೂ ವಿನಂತಿ.

ಪ್ರಧಾನ ಸಂಚಾಲಕರು
ಜಂಟೀ ಕ್ರಿಯಾ ಸಮಿತಿ, ಗುರುವಾಯನಕೆರೆ