ನಗರದಲ್ಲಿ ಶ್ವಾನ ಸಂತತಿ ನಿಯಂತ್ರಣಕ್ಕೆ ಮಾನವೀಯ ವಿಧಾನ

ವಿಶೇಷ ವರದಿ

ಮಂಗಳೂರು : ನಗರದ ಬಹುದೊಡ್ಡ ಸಮಸ್ಯೆಗಳಲ್ಲಿ ಬೀದಿನಾಯಿ ಸಮಸ್ಯೆಯೂ ಒಂದು. ಮಂಗಳೂರಿನ ಹಲವಾರು ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿದ್ದು, ಶಾಲಾ ಮಕ್ಕಳು, ವಯಸ್ಕರು ಮತ್ತು ಕೆಲಸಕ್ಕೆ ತೆರಳುವ ಜನಸಾಮಾನ್ಯರಿಗೆ ಬೀದಿಯಲ್ಲಿ ಸಂಚರಿಸುವುದೆಂದರೆ ನಡುಕ ಹುಟ್ಟಿಸಿದೆ.

ರಾಜ್ಯದ ಇತರ ಭಾಗದ ನಗರಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರೂರ ವಿಧಾನವನ್ನು ಅನುಸರಿಸುತ್ತಿದ್ದು, ತಮಿಳುನಾಡಿನಲ್ಲಿ ನಾಯಿಗಳನ್ನು ಸಾಯಿಸಲಾಗುತ್ತಿದೆ. ಆದರೆ ಮಂಗಳೂರಿನಲ್ಲಿ ನಾಯಿಸಂತತಿ ನಿಯಂತ್ರಣಕ್ಕೆ ಮಾತ್ರ ದಯಾಳು ವಿಧಾನವನ್ನು ಅನುಸರಿಸಲಾಗುತ್ತಿದೆ.

ನಗರದ ಪ್ರಾಣಿ ಪ್ರಿಯರು ಪ್ರಾಣಿ ಸಂರಕ್ಷಣ ಟ್ರಸ್ಟ್ ನಾಯಕತ್ವದಲ್ಲಿ ನಗರದ ಬೀದಿ ನಾಯಿ ಸಂತತಿ ನಿಯಂತ್ರಣವನ್ನು ಮಾನವೀಯ ವಿಧಾನದಲ್ಲಿ ನಿಯಂತ್ರಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ   ಮಹಾನಗರಪಾಲಿಕೆ ಮುಂದೆ ಇಟ್ಟಿದ್ದ ಬೇಡಿಕೆಯನ್ನು ಮಹಾನಗರಪಾಲಿಕೆ ಒಪ್ಪಿಕೊಂಡಿರುವುದಕ್ಕೆ ಟ್ರಸ್ಟಿನ ಕಾರ್ಯಕರ್ತರು ಕೃತಜ್ಞತೆ ಸಲ್ಲಿಸಿದ್ದಾರೆ.

“ಹಿಂದೆ ನಾಯಿ ಹಿಡಿಯುವವರು ನಾಯಿಗಳನ್ನು ಹಿಡಿಯಲು ತಂತಿಗಳನ್ನು ಬಳಸುತ್ತಿದ್ದರು. ಆ ತಂತಿಗೆ ಬಿದ್ದ ನಾಯಿಯನ್ನು ಸಾಯುವ ತನಕ ಹೊಡೆದು ಕೊಲ್ಲುತ್ತಿದ್ದರು, ಇವೆಲ್ಲಾ ಸಾರ್ವಜನಿಕ ಸ್ಥಳಗಳಲ್ಲಿಯೇ ನಡೆಯುತ್ತಿತ್ತು. ನಂತರ ಸತ್ತ ನಾಯಿಗಳನ್ನು ವಾಮಂಜೂರಿನ ಡಂಪಿಂಗ್ ಯಾರ್ಡಿನಲ್ಲಿ ಎಸೆಯುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ನಾಯಿ ಕೊಲ್ಲುವವರ ಶುಲ್ಕ ತಲಾ ಒಂದು ನಾಯಿಗೆ ರೂ 100. ಆದರೆ ಈಗ ಎನಿಮಲ್ ಕೇರ್ ಟ್ರಸ್ಟ್ ಕ್ರೂರ ಮತ್ತು ಅಮಾನವೀಯ ವಿಧಾನವನ್ನು ನಿಯಂತ್ರಿಸಿ ಮಾನವೀಯ ವಿಧಾನ ಅನುಸರಿಸುತ್ತಿದೆ” ಎಂದು ಉರ್ವದ ಪ್ರಾಣಿ ಪ್ರಿಯ ರಾಮಕೃಷ್ಣ ಆಚಾರ್ ಹೇಳಿದ್ದಾರೆ.

“ಬೀದಿನಾಯಿಗಳ ಜನನ ನಿಯಂತ್ರಣ ಕಾರ್ಯಾಚರಣೆಯ ಅನುಮತಿಯನ್ನು ಮಹಾನಗರಪಾಲಿಕೆಯಿಂದ ಪಡೆದ ನಂತರ ಬೀದಿಗಳಲ್ಲಿರುವ ನಾಯಿಗಳನ್ನು ಹಿಡಿಯುವ ಪ್ರಕ್ರಿಯೆ ನಡೆಸುತ್ತಿದ್ದೇವೆ. ವಾರ್ಡ್ ಪ್ರಕಾರ ಬೀದಿ ನಾಯಿಗಳನ್ನು ಪತ್ತೆಮಾಡುವುದು ಸುಲಭ. ಪ್ರತಿ ವಾರ್ಡಿನಲ್ಲಿ ಸುಮಾರು 100 ಬೀದಿನಾಯಿಗಳನ್ನು ಎಣಿಸಿದ್ದೇವೆ. 70 ಪರ್ಸೆಂಟ್ ನಾಯಿಗಳಿಗೆ ಜನನ ನಿಯಂತ್ರಣ ಚಿಕಿತ್ಸೆಗಳನ್ನು ನೀಡಿದ್ದೇವೆ. ಇದೇ ವೇಳೆ ನಾಯಿ ಮಾಲಕರಿಗೆ ನಾಯಿಗಳ ಮರಿಗಳನ್ನು ಬೀದಿಗಳಲ್ಲಿ ಬಿಡದಂತೆ ಮನವರಿಕೆ ಮಾಡಿದ್ದೇವೆ. ಇದು ಬೀದಿ ನಾಯಿ ನಿಯಂತ್ರಣಕ್ಕೆ ಉತ್ತಮ ಪರಿಹಾರ” ಎಂದು ಪ್ರಾಣಿ ಸಂರಕ್ಷಣಾ ಟ್ರಸ್ಟಿನ ಟ್ರಸ್ಟೀ ಸುಮಾ ರಮೇಶ್ ಹೇಳಿದ್ದಾರೆ.

ಮಾನವೀಯ ವಿಧಾನದಲ್ಲಿ ಬೀದಿ ನಾಯಿ ನಿಯಂತ್ರಣ ಪ್ರಕ್ರಿಯೆ 1999ರಲ್ಲಿ ಮಂಗಳೂರು ನಗರ ಪಾಲಿಕೆ ಆಯುಕ್ತ ಜೆ ಆರ್ ಲೋಬೊ ಅವರ ಅವಧಿಯಲ್ಲಿ ಪ್ರಾರಂಭಿಸಲಾಗಿದೆ.

ಪ್ರಸಕ್ತ ನಗರದಲ್ಲಿ ಅಂದಾಜು 3,000 ಬೀದಿನಾಯಿಗಳಿದ್ದು, ಸರ್ಕಾರೇತರ ಸಂಸ್ಥೆಯಾದ ಎಸಿಟಿ ಸಾರ್ವಜನಿಕ ಸ್ಥಳಗಳಿಂದ ನಾಯಿಗಳನ್ನು ಹಿಡಿದು ಅವುಗಳಿಗೆ ಜನನ ನಿಯಂತ್ರಣ ಮತ್ತು ರೇಬೀಸ್ ಚುಚ್ಚುಮದ್ದು ನೀಡಿ, ಗುರುತಿಗಾಗಿ ಚರ್ಮದಲ್ಲಿ ವಿ ಆಕಾರದಲ್ಲಿ ಕತ್ತರಿಸಿ ಮತ್ತೆ ಅದೇ ಸ್ಥಳದಲ್ಲಿ ಬಿಡುತ್ತಿದೆ.

ಎಸಿಟಿ ಸಂಸ್ಥೆಯು 2013ರಲ್ಲಿ 2,019 ನಾಯಿಗಳಿಗೆ, 2014ರಲ್ಲಿ 2,864 ನಾಯಿಗಳಿಗೆ, 2015ರಲ್ಲಿ 3,023 ಮತ್ತು 2016ರಲ್ಲಿ ಜನವರಿಯಿಂದ ನವೆಂಬರಿನವರೆಗೆ 2,064 ನಾಯಿಗಳಿಗೆ ಚಿಕಿತ್ಸೆ ನೀಡಿದೆ. ನಾಯಿಯೊಂದರ ಚಿಕಿತ್ಸೆಯ ವೆಚ್ಚ ರೂ 445. 2015ರಲ್ಲಿ ನಾಯಿಗಳಿಗಾಗಿ ಮಾಡಿದ ಗರಿಷ್ಟ ವೆಚ್ಚ ರೂ 13,45,235.

ಬೀದಿನಾಯಿಗಳು ಹೆಚ್ಚಾಗಿ ಇರುವ ಪ್ರದೇಶಗಳೆಂದರೆ ಮೀನು ಮತ್ತು ಮಟನ್ ಮಾರುಕಟ್ಟೆ ಪ್ರದೇಶ, ಕಸದ ತೊಟ್ಟಿಗಳ ಆಸುಪಾಸಿನಲ್ಲಿ. ಕ್ಯಾಂಟೀನ್, ಹೋಟೆಲ್ ಮತ್ತು ರೆಸ್ಟಾರೆಂಟುಗಳ ಪಕ್ಕದಲ್ಲಿ. ಬಸ್ ನಿಲ್ದಾಣ ಮತ್ತು ನಿವಾಸಗಳ ಪ್ರದೇಶಗಳಲ್ಲಿ ಓಡಾಡುತ್ತಿರುತ್ತವೆ. ಇದರಿಂದ ವಾಹನಗಳ ಎದುರು ರಸ್ತೆ ಅಡ್ಡದಾಟುವುದು, ದ್ವಿಚಕ್ರ ವಾಹನಗಳಿಗೆ ಅಡ್ಡ ಬರುವುದು, ಪಾದಚಾರಿಗಳ ಮೇಲೆ ಬೀಳಲು ಬರುವುದು, ಕಚ್ಚುವುದು ಮತ್ತಿತರ ತೊಂದರೆಗಳು ಎದುರಾಗುತ್ತಿವೆ.