ಬರುತ್ತಿದೆ ಮೂಢನಂಬಿಕೆ ವಿರುದ್ಧ ಚಿತ್ರ

ಚಿತ್ರಪ್ರೇಮಿಗಳ ಟೇಸ್ಟ್ ಈಗ ಬದಲಾಗುತ್ತಿದೆ. ಕನ್ನಡದಲ್ಲೂ ಈಗ ಬೇಕಷ್ಟು ವಿಭಿನ್ನ ರೀತಿಯ ಸಿನಿಮಾಗಳೂ ತೆರೆಕಂಡು ಅವು ಯಶಸ್ಸನ್ನೂ ಕಂಡಿವೆ. ಬರೀ ದೊಡ್ಡ ದೊಡ್ಡ ಹೀರೋಗಳೂ, ಅದ್ದೂರಿ ಬಜೆಟ್, ವೈಭವದ ಚಿತ್ರೀಕರಣ, ಗ್ಲಾಮರಸ್ ಬೆಡಗಿಯರು ಇರುವ ಚಿತ್ರಗಳೇ ಸಕ್ಸಸ್ ಆಗುತ್ತವೆ ಎನ್ನುವ ಕಾಲವೀಗ ಮುಗಿದಿದೆ. ಅಂತಹ ಚಿತ್ರಗಳೂ ಮಕಾಡೆ ಮಲಗಿರುವ ಉದಾಹರಣೆಗಳು ಬೇಕಷ್ಟಿವೆ. `ರಂಗಿ ತರಂಗ’, `ತಿಥಿ’ಯಂತಹ ಸಿನಿಮಾಗಳು ಸೂಪರ್ ಹಿಟ್ ಆಗಿ ಹೊಸಬರಿಗೂ ಹೊಸ ಥೀಮಿನೊಂದಿಗೆ ಚಿತ್ರತೆಗೆಯುವ ವಿಶ್ವಾಸ ಮೂಡಿದೆ. ಅದೇ ಸಾಲಿಗೆ ಸೇರಬಹುದಾದಂತಹ ಚಿತ್ರವೊಂದು ಬರುತ್ತಿದೆ.
ಹೌದು, ಮೂಢನಂಬಿಕೆ ವಿರುದ್ಧ ಸಮರ ಸಾರುವ ಚಿತ್ರವೊಂದು ತೆರೆಮೇಲೆ ಬರುತ್ತಿದೆ. ಸಿನಿಮಾದ ಹೆಸರು `ಮೂಢಾಯಣ’. ಇದು ಉಪಾಧ್ಯ ಅವರ `ಬಾಳ ಅರ್ಬುದ’ ಎಂಬ ಕಾದಂಬರಿ ಆಧಾರಿತ ಸಿನಿಮಾ.
ಇದು ಮೂಢನಂಬಿಕೆಯ ವಿರುದ್ಧ ಹೋರಾಡುವ ಬಾಲಕನೊಬ್ಬನ ಕಥೆಯಾಗಿದೆ. ಬಾಲಕ ತನ್ನ ಗ್ರಾಮವನ್ನು ಮೂಢನಂಬಿಕೆ ಮುಕ್ತ ಗ್ರಾಮವಾಗಿಸುತ್ತಾನೆ. ಬಾಲಕನ ಹೋರಾಟವನ್ನು ಗುರುತಿಸಿ, ಸರ್ಕಾರ ಅವನಿಗೆ ರಾಷ್ಟ್ರ ಪ್ರಶಸ್ತಿ ನೀಡುತ್ತದೆ. ಬಾಲಕ ರಾಷ್ಟ್ರಪ್ರಶಸ್ತಿಯನ್ನು ತಿರಸ್ಕರಿಸುತ್ತಾನೆ. ಕಾರಣ ತನ್ನ ಗ್ರಾಮವೊಂದು ಮೂಢನಂಬಿಕೆ ಮುಕ್ತವಾದರೆ ಸಾಲದು, ಇಡೀ ದೇಶವೇ ಮೂಢನಂಬಿಕೆ ಮುಕ್ತವಾಗಬೇಕೆಂಬುದು ಬಾಲಕನ ಹೆಬ್ಬಯಕೆಯಾಗಿರುತ್ತದೆ. ಅದಕ್ಕಾಗಿ ಸರ್ಕಾರ ಮೂಢನಂಬಿಕೆಗಳನ್ನು ತಡೆಯುವ ಕಾನೂನು ಜಾರಿಗೆ ತಂದರೆ ಮಾತ್ರ ತಾನು ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವುದಾಗಿ ಹೇಳುತ್ತಾನೆ. ಆಗ ಸರ್ಕಾರ ಬಾಲಕನ ಬೇಡಿಕೆಗೆ ಮಣಿದು, ಮೂಢನಂಬಿಕೆಗಳನ್ನು ತಡೆಯುವ ಕಾನೂನು ಜಾರಿಗೆ ತರುತ್ತದೆ. ಮತ್ತೆ ಬಾಲಕನನ್ನು ಆಮಂತ್ರಿಸಿ ಅವನಿಗೆ ರಾಷ್ಟ್ರಪ್ರಶಸ್ತಿ ನೀಡುತ್ತದೆ.
ಈ ಚಿತ್ರದಲ್ಲಿ ಮಂಡ್ಯ ರಮೇಶ್, ಕಲ್ಯಾಣಿ, ಜೂ. ನರಸಿಂಹರಾಜು, ಭವ್ಯಶ್ರೀರೈ ಮೊದಲಾದವರು ನಟಿಸಿದ್ದಾರೆ.
ಸಂಪೂರ್ಣ ಚಿತ್ರೀಕರಣ ಗದಗ ಜಿಲ್ಲೆಯ ಅಬ್ಬೀಗೇರೆ ಗ್ರಾಮದಲ್ಲಿ ನಡೆದಿದೆ. ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಸಿನಿಮಾ ತೆರೆಮೇಲೆ ಬರಲಿದೆ.