ಎತ್ತಿನಹೊಳೆ ರಥಯಾತ್ರೆ ನಾಟಕ

ಕರಾವಳಿಯಲ್ಲಿ ಹಿಂದೂತ್ವವಾದಿ ಪಕ್ಷದ ದಗಲ್ಬಾಜಿ

ಟಿ ವಿಶೇಷ ವರದಿ

ಮಂಗಳೂರು : ರಾಜ್ಯದಲ್ಲಿ ಬಹುಮತ ಹೊಂದಿದ್ದ ಅಂದಿನ ಭಾರತೀಯ ಜನತಾ ಪಾರ್ಟಿ ಸರಕಾರವೇ ಬಯಲು ಸೀಮೆಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ಅಂಗೀಕಾರ ನೀಡಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಪಾದಯಾತ್ರೆ ಎಂಬುದು ಜನರಿಗೆ ಮಂಕುಬೂದಿ ಎರಚುವ ಬಿಜೆಪಿ ಖಾಯಂ ಖಯಾಲಿಯಾಗಿ ಹೋಗಿದೆ.

ಇಂದು ಕೇಂದ್ರ ಸಚಿವರಾಗಿರುವ ಬಿಜೆಪಿಯ ಡೀವಿ ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದಾಗ ವಿಸ್ತ್ರತ  ಯೋಜನಾ ವರದಿ ಸಿದ್ಧವಾಗದಿದ್ದರೂ ಅನುದಾನ ಬಿಡುಗಡೆ ಮಾಡಿ ಅನುಷ್ಠಾನ ಮಾಡಲು ವಿಶೇಷ ಆಸಕ್ತಿ ವಹಿಸಿದಾಗ ಸುಮ್ಮನಿದ್ದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತವರ ಬಿಜೆಪಿ ಮುಖಂಡರು ಜನರಿಗೆ ಪರಿಸರದ ಹೆಸರನಲ್ಲಿ ವಂಚನೆ ಮಾಡುವುದು ಬಟಾಬಯಲಾಗಿದೆ.

ಆಗಸ್ಟ್ 2011ರಿಂದ ಜುಲೈ 2012ರ ತನಕ ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದಾಗ ಯೋಜನೆ ಮಂಜೂರು ಆಗಿದ್ದು, ಅನುದಾನ ಕೂಡ ಬಿಡುಗಡೆ ಆಗಿತ್ತು. ಈ ಸಂದರ್ಭದಲ್ಲಿ ಅಂದಿನ ವಿಧಾನಸಭೆಯ ಬಿಜೆಪಿ ಸದಸ್ಯರಾಗಿದ್ದ ಅಂಗಾರ, ಮಲ್ಲಿಕಾ ಪ್ರಸಾದ್, ಎನ್ ಯೋಗೀಶ್ ಭಟ್ ಮತ್ತು ಅಂದು ಸಚಿವರಾಗಿದ್ದ ಕೃಷ್ಣ ಪಾಲೇಮಾರ್ ಅವರಾಗಲಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಆಗಲಿ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸಲೇ ಇಲ್ಲ.

ಎತ್ತಿನಹೊಳೆ ಯೋಜನೆಗೆ ಡಿಪಿಆರ್ ತಯಾರಿಸದೆ ತರಾತುರಿಯಲ್ಲಿ ಒಪ್ಪಿಗೆ ನೀಡಿದಾಗ ಅಂದು ಕಾಂಗ್ರೆಸ್ ಪಕ್ಷದ ಸ್ಥಳೀಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದರೂ, ಅಂದು  ಸಂಸದ ನಳಿನ್ ಕುಮಾರ್ ಕಟೀಲ್  ಅವರಿಗೆ ಈ ಬಗ್ಗೆ ಆಸಕ್ತಿಯೇ ಇರಲಿಲ್ಲ. ಕಳೆದ ಬಾರಿ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಎತ್ತಿನಹೊಳೆ ಯೋಜನೆಯೊಂದು ಚುನಾವಣಾ ವಿಚಾರವಾಗಿ ಗೋಚರಿಸಿತು. 2015ರಲ್ಲಿ ಪಾದಯಾತ್ರೆಯೊಂದನ್ನು ಕೈಗೊಂಡ ಕಟೀಲ್ ಅದನ್ನೊಂದು ರಾಜಕೀಯ ಲಾಭದ ವಿಚಾರವಾಗಿ ಸಕ್ರಿಯವಾಗಿರಿಸಿಕೊಂಡಿದ್ದಾರೆ. ಯಾವುದೇ ಪ್ರಾಮಾಣಿಕತೆ, ಆದರ್ಶಗಳ ಗಂಧಗಾಳಿ ಗೊತ್ತಿಲ್ಲದ ಬಿಜೆಪಿ ಮುಖಂಡರಿಗೆ ರಾಮಜನ್ಮಭೂಮಿಯ ಅನಂತರ ಕರಾವಳಿಯಲ್ಲಿ ಬಹುದೊಡ್ಡ ಓಟ್ ಬ್ಯಾಂಕ್ ಕಾಮಧೇನುವಾಗಿ ಎತ್ತಿನಹೊಳೆ ಯೋಜನೆ ಪರಿಣಮಿಸಿದೆ.

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಚಿಕ್ಕಬಳ್ಳಾಪುರ ಸಂಸದ ಎಂ ವೀರಪ್ಪ ಮೊಯಿಲಿ ಮತ್ತು ಸದಾನಂದ ಗೌಡ ಅವರು ಸಕ್ರಿಯವಾಗಿ ಪರವಾದ ಧೋರಣೆಯುಳ್ಳವರಾಗಿದ್ದರು.  ಮೊದಲಿಗೆ ಚಿಕ್ಕಬಳ್ಳಾಪುರದ ಬಿಜೆಪಿ ಲೋಕಸಭಾ ಅಭ್ಯರ್ಥಿ ಆಗಿದ್ದ ಮಾಜಿ ಮಂತ್ರಿ ಬಚ್ಚೇಗೌಡರು ಸೇರಿದಂತೆ ತುಮಕೂರು, ಬೆಂಗಳೂರು ಗ್ರಾಮಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು ಎತ್ತಿನಹೊಳೆ ಯೋಜೆನೆಗೆ ವಿರೋಧ ವ್ಯಕ್ತಪಡಿಸಿಲ್ಲ.

ಸದಾನಂದ ಗೌಡ ಅವರ ಅನಂತರ ಮುಖ್ಯಮಂತ್ರಿ ಆಗಿದ್ದ ಜಗದೀಶ ಶೆಟ್ಟರು ಕೂಡ ಈ ನಾಲ್ಕು ಜಿಲ್ಲೆಗಳಲ್ಲಿ 2013ರ ಚುನಾವಣಾ ಪ್ರಚಾರದ ವೇಳೆ “ಎತ್ತಿನಹೊಳೆಗೆ ಮಂಜೂರಾತಿ ನೀಡಿ ಅನುದಾನ ನೀಡಿದ್ದೇವೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನ ಮಾಡುತ್ತೇವೆ” ಎಂದು ಘಂಟಾ ಘೋಷವಾಗಿ ಹೇಳಿದ್ದರು. ಇಂದು ಕರಾವಳಿಯಲ್ಲಿ ಮೂಲೆಗುಂಪು ಆಗಿರುವ ಕಾಂಗ್ರೆಸ್ಸಿನವರೊಂದಿಗೆ ಸೇರಿಕೊಂಡು ಎತ್ತಿನಹೊಳೆ ಯೋಜನೆ ವಿರುದ್ಧ ರಥಯಾತ್ರೆ ಮಾಡುತ್ತಿರುವ ಬಿಜೆಪಿ ಮುಖಂಡರು ಆಗ ಈ ಬಗ್ಗೆ ಯಾಕೆ ವಿರೋಧ ವ್ಯಕ್ತಪಡಿಸಿಲ್ಲ ಎಂಬುದು ಪ್ರಶ್ನಾರ್ಹವಾಗಿದೆ.

ಒಂದು ನೀರಾವರಿ ಯೋಜನೆ ಬಗ್ಗೆ ರಾಜ್ಯದ ಒಂದೆಡೆ ಒಂದು ನಿಲುವು ಮತ್ತು ಮತ್ತೊಂದು ಜಿಲ್ಲೆಯಲ್ಲಿ ತದ್ವಿರುದ್ಧವಾದ ನಿಲುವು ಹೊಂದಲು ಸಾಧ್ಯವಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ. ತಮ್ಮ ಸರಕಾರವೇ ಆರಂಭಿಸಿದ ಯೋಜನೆಯನ್ನು ವಿರೋಧ ಮಾಡುವ ಮೂಲಕ ಜನರಿಗೆ ಮಂಕುಬೂದಿ ಎರಚಿ ಮತಬ್ಯಾಂಕ್ ಮಾಡಬಲ್ಲ ಚಾಕಚಕ್ಯತೆ ಇರುವ ಏಕೈಕ ಪಕ್ಷ ಕೂಡ ಬಿಜೆಪಿಯೇ ಆಗಿದೆ.