ರಾಷ್ಟ್ರಪತಿ ಮುಖರ್ಜಿಗೆ ಉಡುಪಿಯಲ್ಲಿ ವಿಶೇಷ ಊಟೋಪಚಾರ

ವಿಶೇಷ ವರದಿ

ಉಡುಪಿ : ರವಿವಾರ ತಮ್ಮ ಉಡುಪಿ ಭೇಟಿಯನ್ನು ಕೃಷ್ಣ ಮಠದಲ್ಲಿ ಪೂಜೆ ಸಲ್ಲಿಸುವ ಮೂಲಕ ಹಾಗೂ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಯ ಆಶೀರ್ವಾದ ಪಡೆಯುವುದರೊಂದಿಗೆ ಆರಂಭಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮಧ್ಯಾಹ್ನದ ಊಟಕ್ಕೆ ಸಾಂಪ್ರದಾಯಿಕ ಉಡುಪಿ ಆಹಾರದ ಬದಲು ಉಡುಪಿಯ ಓಶಿಯನ್ ಪರ್ಲ್ ಹೋಟೆಲಿನ ಪಾಕಪ್ರವೀಣರು ಅವರಿಗೆಂದೇ ತಯಾರಿಸಿದ್ದ ವಿಶೇಷ ಖಾದ್ಯಗಳನ್ನು ಉಣಬಡಿಸಲಾಯಿತು.

ದಾಲ್ ಫುಲ್ಕಾ ಹೊರತುಪಡಿಸಿ ಬೇರೆಲ್ಲಾ ಖಾದ್ಯಗಳ ರುಚಿಯನ್ನು ರಾಷ್ಟ್ರಪತಿ ಸವಿದರು ಎಂದು ಓಶಿಯನ್ ಪರ್ಲ್ ಜನರಲ್ ಮ್ಯಾನೇಜರ್ ಬಿಜು ವರ್ಗೀಸ್ ಹೇಳಿದ್ದಾರೆ.

ರಾಷ್ಟ್ರಪತಿಗೆ ವೆಲ್ಕಮ್ ಡ್ರಿಂಕ್ “ವರ್ಜಿನ್ ಮೊಜಿಟೊ” ನೀಡಲಾಗಿತ್ತು. ನಂತರ `ವೆಜಿಟೇಬಲ್ ಟೊರ್ಟಿಲ್ಲಾ ಸೂಪ್, ಕಡಲೆ, ಬಾದಾಮಿ, ಮೊಳಕೆ ಬರಿಸಿದ ಕಾಳುಗಳನ್ನೊಳಗೊಂಡ ಸಲಾಡ್, `ಪನ್ಝನೆಲ್ಲ ಸಲಾಡ್’ ಹಾಗೂ `ಸಿಟ್ರಸ್ ಗ್ರೀನ್ ವೆಜ್ ಸಲಾಡ್’ ಸರ್ವ್ ಮಾಡಲಾಯಿತು. ಊಟಕ್ಕಾಗಿ ಫಲಾಫೆಲ್ ವಿದ್ ಹುಮ್ಮುಸ್, ಚಾರ್ ಗ್ರಿಲ್ಡ್ ತರಕಾರಿ,  ಸಾಟೆಡ್ ಬ್ರೊಕ್ಕೊಲಿ ವಿದ್ ಅಸ್ಪರಾಗಸ್, ವೆಜಿಟೇರಿಯನ್ ಕಸೋಲೆಟ್, ಮಕರೋನಿ ಅಗ್ಲಿಯೋ ಒಲಿಯ, ಬ್ರೆಝಿಲಿಯನ್ ರೈಸ್, ಲೈವ್ ಫುಲ್ಕಾ ಮತ್ತು ದಾಲ್ ತಡ್ಕಾ ಇತ್ತು. ತುಂಡರಿಸಿದ ಹಣ್ಣಗಳು ಹಾಗೂ ಶುಗರ್ ಫ್ರೀ ಯೊಗರ್ಟ್ ಕೂಡ ರಾಷ್ಟ್ರಪತಿ ಊಟದ ಮೆನುವಿನಲ್ಲಿ ಸೇರಿತ್ತು.

ಮುಖ್ಯ ಚೆಫ್ ರಾಮ್ ಬಹಾದುರ್ ನೇತೃತ್ವದಲ್ಲಿ ಒಟ್ಟು 28 ಮಂದಿ ಆಹಾರ ತಯಾರಿಯಲ್ಲಿ ತೊಡಗಿದ್ದರು. ರಾಷ್ಟ್ರಪತಿ ತಂಡದಲ್ಲಿ ಕನಿಷ್ಠ 75 ಜನರಿದ್ದರು. ರಾಷ್ಟ್ರಪತಿಯ ಆಹಾರ ತಂಡದ ಮುಖ್ಯಸ್ಥರಾಗಿ ಡಾ ವಾಸುದೇವ್ ವೆಂಕಿದೆಶ್ ಇದ್ದರು.


ಛಾಯಾಗ್ರಾಹಕನನ್ನು ಹೊರಕಳುಹಿಸಿದಾಗ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ತಂಡದೊಂದಿಗೆ ಆಗಮಿಸಿದ್ದ ಛಾಯಾಗ್ರಾಹಕರೊಬ್ಬರನ್ನು ರಾಜಾಂಗಣದ ಸುರಕ್ಷತೆಯ ಉಸ್ತುವಾರಿ ಹೊತ್ತಿದ್ದ ಅಧಿಕಾರಿಯೊಬ್ಬರು ಬಲವಂತವಾಗಿ ಹೊರ ಕಳುಹಿಸಿದ ಘಟನೆಯೂ ನಡೆಯಿತು. ಯಾರೋ ಹೊರಗಿನವನೆಂದು ಕೊಂಡು ಈ ಕ್ರಮ ಕೈಗೊಳ್ಳಲಾಗಿತ್ತು. ಆತ ತನ್ನ ಗುರುತು ಕಾರ್ಡ್ ತೋರಿಸಿ ಸಮಾರಂಭದ ಚಿತ್ರಗಳನ್ನು ಕ್ಲಿಕ್ಕಿಸಲು ರಾಷ್ಟ್ರಪತಿ ಭವನದಿಂದ ಬಂದಿರುವುದಾಗಿ ಆತ ಹೇಳಿಕೊಂಡರೂ ಯಾರೂ ಕಿವಿಗೊಡಲಿಲ್ಲ.

ಕೊನೆಗೆ ಆತ ತನ್ನ ಹಿರಿಯಾಧಿಕಾರಿಗಳಿಗೆ ತಿಳಿಸಿದ್ದು, ಅವರು ಉಡುಪಿ ಎಸ್ಪಿ ಕೆ ಟಿ ಬಾಲಕೃಷ್ಣರಿಗೆ ಮಾಹಿತಿ ನೀಡಿದ ನಂತರ ಛಾಯಾಗ್ರಾಹಕನನ್ನು ಒಳಕ್ಕೆ ಬಿಡಲಾಯಿತು.