ಹಳೆಯಂಗಡಿ ಸಸಿಹಿತ್ಲನ್ನು ಒಂದಾಗಿಸಿದ ಸೇತುವೆ

ನಂದಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಹಳೆಯಂಗಡಿ-ಸಸಿಹಿತ್ಲು ಪರಿಸರದ ಜನರ ತಲೆಮಾರುಗಳ ಕನಸಾಗಿತ್ತು. ಈಗ ಅದು ನಮ್ಮ ತಲೆಮಾರಿನಲ್ಲಿ ನೆರವೇರಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಸಸಿಹಿತ್ಲು ಹಳೆಯಂಗಡಿ ಗ್ರಾಮ ಪಂಚಾಯತಗೆ ಸೇರಿದ್ದರೂ ನಡುವೆ ಹರಿಯುತ್ತಿದ್ದ ನಂದಿನಿ ನದಿಯಿಂದಾಗಿ ಈ ಎರಡು ಸ್ಥಳಗಳು ಬೇರೆ ಬೇರೆ ಹಾಗೂ ದೂರ ಅನಿಸುತ್ತಿದ್ದವು. ಇಲ್ಲಿನ ಜನರ ನಡುವೆ ನಿಕಟ ಸಂಪರ್ಕವಿದ್ದರೂ ಭೇಟಿ ಕಷ್ಟವಾಗಿತ್ತು. ಸಸಿಹಿತ್ಲಿನವರು ಹಳೆಯಂಗಡಿಗೆ ಬರಬೇಕಾದರೆ ದೂರದ ಮುಕ್ಕದ ಮೂಲಕ ಸುತ್ತುಬಳಸಿ ಬರಬೇಕಾಗಿತ್ತು.
ಈಗ ಶಾಸಕ ಅಭಯಚಂದ್ರ ಮತ್ತು ಸ್ಥಳೀಯ ನಾಯಕ ಹಾಗೂ ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಸಂತ ಬೆರ್ನಾಡ್ ಪರಿಶ್ರಮದಿಂದಾಗಿ ನಿರ್ಮಾಣಗೊಂಡಿರುವ ಸೇತುವೆ ಜನರನ್ನು ಹತ್ತಿರವಾಗಿಸಿದೆ ಹಾಗೂ ಅವರ ದೈನಂದಿನ ಓಡಾಟಗಳನ್ನು ಸುಲಭಗೊಳಿಸಿದೆ.
ಇದರ ಜೊತೆಗೆ, ಸೇತುವೆಯಿಂದ ಹೊೈಗೆಗುಡ್ಡೆ ಮತ್ತು ಚಿತ್ರಾಪು ಗ್ರಾಮಗಳಿಗೆ ನೂತನ ಸಂಪರ್ಕ ರಸ್ತೆಯೂ ಹೊಸದಾಗಿ ನದಿ ಬದಿಯಲ್ಲಿ ನಿರ್ಮಾಣಗೊಂಡಿದೆ. ಈ ಮೂಲಕ ಮೂಲ್ಕಿ-ಚಿತ್ರಾಪು-ಹೊೈಗೆಗುಡ್ಡೆ-ಪಡುಪಣಂಬೂರು ಹಳೆಯಂಗಡಿ ಕದಿಕೆ ಸಹಿಹಿತ್ಲು ನಡುವೆ ಸುಲಲಿತ ಸಂಪರ್ಕ ಏರ್ಪಾಡಾಗಿದೆ
ಇನ್ನು ಕೆಲವೇ ದಿನಗಳಲ್ಲಿ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ವೈಭವದ ನಡಾವಳಿ ಮಹೋತ್ಸವ ನಡೆಯಲಿದೆ. ಹಿಂದಿನ ಕಾಲದಲ್ಲಿ ನಡಾವಳಿಗೆ ಹೋಗುವವರು ದೋಣಿಯ ಮೂಲಕ ನದಿ ದಾಟಿ ಹೋಗಬೇಕಾಗಿತ್ತು. ಅಥವಾ ಮುಕ್ಕದ ಮೂಲಕ ಸುತ್ತು ಬಳಸಿ ಹೋಗಬೇಕಾಗಿತ್ತು. ಆದರೆ  ನೂತನ ಸೇತುವೆ ಮತ್ತು ನೂತನ ಸಂಪರ್ಕ ರಸ್ತೆಯಿಂದಾಗಿ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಜನರು ಸುರಕ್ಷಿತವಾಗಿ ಹಾಗೂ ಸುಲಲಿತವಾಗಿ ಯಾವುದೇ ಸಮಯದಲ್ಲಿ ಜಾತ್ರೆಗೆ ಹೋಗಿಬರಬಹುದಾಗಿದೆ

  • ರಾಜೇಶ್ ಹಳೆಯಂಗಡಿ